Asianet Suvarna News Asianet Suvarna News

ಅಮೆರಿಕದಲ್ಲಿ ಉಗ್ರರ ದಾಳಿ: ನಟಿ ಪ್ರಿಯಾಂಕಾ ಸ್ವಲ್ಪದರಲ್ಲಿ ಪಾರು; ಆಸ್ಪತ್ರೆಯಲ್ಲೂ ಐಸಿಸ್ ಧ್ವಜ ಬೇಕೆಂದ ಆರೋಪಿ

* ಅಮೆರಿಕದಲ್ಲಿ ಭಯೋತ್ಪಾದಕನ ದಾಳಿಗೆ 8 ಬಲಿ

* ಅಡ್ಡಾದಿಡ್ಡಿ ಟ್ರಕ್ ಚಲಾಯಿಸಿ ಜನರ ಮಾರಣಹೋಮ ಮಾಡಿದ ಉಗ್ರಗಾಮಿ

* ಆರೋಪಿ ಸೇಫುಲ್ಲೋ ಸೈಪೋವ್ ಉಜ್ಬೆಕಿಸ್ತಾನದಿಂದ ಅಮೆರಿಕಕ್ಕೆ ವಲಸೆ ಬಂದಿದ್ದ

* ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ವಿಡಿಯೋಗಳಿಂದ ದಾಳಿಗೆ ಸ್ಫೂರ್ತಿ ಪಡೆದಿದ್ದ ಆರೋಪಿ

* ನಟಿ ಪ್ರಿಯಾಂಕಾ ಚೋಪ್ರಾ ಮನೆಯಿಂದ ಕೆಲವೇ ಮೀಟರ್'ಗಳಷ್ಟು ದೂರದಲ್ಲಿ ಘಟನೆ

america new york terror attack by uzbek immigrant

ನ್ಯೂಯಾರ್ಕ್/ನವದೆಹಲಿ: '9/11’ ದಾಳಿ ಬಳಿಕ ಮತ್ತೊಂದು ಭೀಕರ ಭಯೋತ್ಪಾದಕ ದಾಳಿಗೆ ಅಮೆರಿಕ ಬುಧವಾರ ಸಾಕ್ಷಿಯಾಗಿದೆ. ಐಸಿಸ್ ಉಗ್ರ ಸಂಘಟನೆಯಿಂದ ಪ್ರೇರಣೆ ಪಡೆದ ಯುವಕನೊಬ್ಬ, ಡಬ್ಲ್ಯುಟಿಒ ನೂತನ ಕಟ್ಟಡದಿಂದ ಅನತಿ ದೂರದಲ್ಲೇ ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಾ ಸೈಕಲ್ ಹಾಗೂ ಪಾದಚಾರಿ ಮಾರ್ಗದಲ್ಲಿ ಅಡ್ಡಾದಿಡ್ಡಿ ಪಿಕಪ್ ಟ್ರಕ್ ಚಲಿಸಿ 8 ಮಂದಿಯನ್ನು ಕೊಂದಿದ್ದಾನೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ದಾಳಿಕೋರನನ್ನು ಉಜ್ಬೇಕಿಸ್ತಾನ ಮೂಲದ ಸೇಫುಲ್ಲೋ ಸೈಪೋವ್ ಎಂದು ಗುರುತಿಸಲಾಗಿದೆ. ಗುಂಡು ಹಾರಿಸಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತಪಟ್ಟವರಲ್ಲಿ 5 ಮಂದಿ ಅರ್ಜೆಂಟೀನಾದವರಾದರೆ, ಒಬ್ಬರು ಬೆಲ್ಜಿಯಂನವರಾಗಿದ್ದಾರೆ. ಈ ಘಟನೆಯಲ್ಲಿ ಭಾರತೀಯ ನಾಗರಿಕರು ಯಾರಿಗೂ ತೊಂದರೆಯಾಗಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ದಾಳಿ ಖಂಡಿಸಿದ್ದಾರೆ.

16 ವರ್ಷಗಳಲ್ಲೇ ಭೀಕರ ದಾಳಿ:
2011ರ ಸೆ.11ರಂದು ಅಲ್‌'ಖೈದಾ ಉಗ್ರ ಸಂಘಟನೆ ಡಬ್ಲ್ಯುಟಿಒ ಗೋಪುರಗಳಿಗೆ ವಿಮಾನ ಡಿಕ್ಕಿ ಹೊಡೆಸಿ ಸುಮಾರು ಮೂರು ಸಾವಿರ ಮಂದಿಯನ್ನು ಕೊಂದು ಹಾಕಿತ್ತು. ಆ ಘಟನೆಯನ್ನು 9/11 ಎಂದೇ ಇವತ್ತಿಗೂ ಕರೆಯಲಾಗುತ್ತದೆ. ಆ ಸ್ಥಳಕ್ಕೇ ಸಮೀಪದಲ್ಲೇ ಉಜ್ಬೇಕಿಸ್ತಾನ ಮೂಲದ ಸೇಫುಲ್ಲಾ ಪಿಕಪ್ ಟ್ರಕ್ ಬಳಸಿ ಬುಧವಾರ ದಾಳಿ ಮಾಡಿದ್ದಾನೆ. 9/11 ಬಳಿಕ ಅಮೆರಿಕ ಕಂಡ ಅತ್ಯಂತ ಭೀಕರ ದಾಳಿ ಇದಾಗಿದೆ.

ಪ್ರಿಯಾಂಕಾ ಪಾರು:
ನ್ಯೂಯಾರ್ಕ್‌ನ ಮ್ಯಾನ್‌'ಹಟನ್ ಪ್ರದೇಶದಲ್ಲಿ ಉಗ್ರನು ದಾಳಿ ನಡೆಸಿದ ಸ್ಥಳ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅವರು ಅಮೆರಿಕ ನಿವಾಸಕ್ಕೆ ಅನತಿ ದೂರದಲ್ಲೇ ಇತ್ತು. ‘ನಮ್ಮ ಮನೆಯಿಂದ ಕೇವಲ ಐದು ಕಟ್ಟಡಗಳ ದೂರದಲ್ಲಿ ದಾಳಿ ನಡೆದಿದೆ’ ಎಂದು ಸ್ವತಃ ಪ್ರಿಯಾಂಕಾ ಅವರೇ ತಿಳಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.

ಖುಷಿಯಾಯಿತೆಂದ ಉಗ್ರ:
29 ವರ್ಷದ ದಾಳಿಕೋರ ಸೇಫುಲ್ಲೋ ಸೈಪೋವ್ ಉಜ್ಬೆಕಿಸ್ತಾನದಿಂದ ಅಮೆರಿಕಕ್ಕೆ ವಲಸೆ ಬಂದಿದ್ದ. ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ವಿಡಿಯೋಗಳನ್ನು ನೋಡಿ ಜಿಹಾದಿ ಸ್ಫೂರ್ತಿ ಪಡೆದ ಸೈಪೋವ್ ವರ್ಷದ ಹಿಂದೆಯೇ ಇಂಥದ್ದೊಂದು ದಾಳಿಗೆ ಯೋಜನೆ ರೂಪಿಸಿದ್ದ. 10 ದಿನಗಳ ಹಿಂದಷ್ಟೇ ಟ್ರಕ್'ವೊಂದನ್ನು ಬಾಡಿಗೆಗೆ ಪಡೆದು ಡ್ರೈವಿಂಗ್ ತಾಲೀಮು ಕೂಡ ನಡೆಸಿದ್ದ.

ಪೊಲೀಸ್ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಈತ ತಾನು ಮಾಡಿದ ಕೆಲಸದ ಬಗ್ಗೆ ಯಾವ ಪಾಪಪ್ರಜ್ಞೆಯನ್ನೂ ಹೊಂದಿಲ್ಲ. ದಾಳಿ ಮಾಡಿದ್ದನ್ನು ನೆನಪಿಸಿಕೊಂಡು ಖುಷಿಯಾಗುತ್ತಿದೆ ಎಂದು ಆತ ಹೇಳುತ್ತಾನೆ. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿರುವ ತನ್ನ ಕೊಠಡಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಧ್ವಜವನ್ನು ಹಾಕಿಕೊಳ್ಳಲು ಅನುಮತಿಯನ್ನೂ ಆತ ಕೇಳಿದ್ದಾನೆ. ವಿಚಾರಣೆ ವೇಳೆ ಈತ ಹೇಳಿರುವ ಪ್ರಕಾರ, ದಾಳಿಗೆ ಈತ ಮೊದಲು ಯೋಜಿಸಿದ್ದ ಸ್ಥಳವೇ ಬೇರೆಯಾಗಿತ್ತು. ಬ್ರೂಕ್'ಲಿಂಗ್ ಬ್ರಿಡ್ಜ್'ನಲ್ಲಿ ಈತ ದಾಳಿ ನಡೆಸಲು ಯೋಜಿಸಿದ್ದ. ಆದರೆ, ಹಾಲೋವೀನ್'ನಲ್ಲಿ ಹೆಚ್ಚು ಜನಸಂದಣಿ ಇರುತ್ತದೆಂಬ ಅಂದಾಜಿನಲ್ಲಿ ಈತ ದಾಳಿ ಸ್ಥಳ ಬದಲಾಯಿಸಿಕೊಂಡನೆನ್ನಲಾಗಿದೆ.

ಟ್ರಕ್'ನ್ನು ಜನರ ಮೇಲೆ ಅಡ್ಡಾದಿಡ್ಡಿ ಓಡಿಸಿ ಹತ್ಯೆ ಮಾಡುವುದು ಐಸಿಸ್'ನ ದಾಳಿ ತಂತ್ರಗಳಲ್ಲೊಂದು. ಟ್ರಕ್ ದಾಳಿ, ಬಂಧಿತರ ರುಂಡಛೇದನ ಮೊದಲಾದ ದೃಶ್ಯಗಳಿರುವ ಇಸ್ಲಾಮಿಕ್ ಸ್ಟೇಟ್'ನ ಸಾವಿರಾರು ವಿಡಿಯೋಗಳು ಸೈಪೋವ್ ಬಳಿ ಇದ್ದವು. ಪೊಲೀಸರು ಇವನ್ನು ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ, ಸೈಪೋವ್ ನಡೆಸಿದ ದಾಳಿಯಲ್ಲಿ ಇನ್ನೊಬ್ಬ ಉಜ್ಬೆಕ್ ವಲಸೆಗಾರನ ಕೈವಾಡವಿರುವ ಶಂಕೆ ಇದೆ. 32 ವರ್ಷದ ಮುಖಮದ್'ಝಾಯಿರ್ ಕದಿರೋವ್ ಎಂಬ ಈ ಶಂಕಿತನನ್ನು ಹಿಡಿಯಲು ಪೊಲೀಸರು ಬಲೆಬೀಸಿದ್ದಾರೆ.

epaperkannadaprabha.com

Follow Us:
Download App:
  • android
  • ios