ಅಮೆರಿಕದ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ಶೂಟೌಟ್ ಪ್ರಕರಣವೆನಿಸಿದೆ. ಕಳೆದ ವರ್ಷ ಆರ್ಲಾಂಡೋದ ನೈಟ್'ಕ್ಲಬ್'ನಲ್ಲಿ ನಡೆದ ಶೂಟೌಟ್'ನಲ್ಲಿ 49 ಜನರು ಬಲಿಯಾಗಿದ್ದರು. ಈಗ ಲಾಸ್ ವೆಗಾಸ್ ಶೂಟೌಟ್'ನಲ್ಲಿ 50ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಗಾಯಾಳುಗಳ ಪ್ರಮಾಣ ಗಮನಿಸಿದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಇದೆ.
ಲಾಸ್ ವೆಗಾಸ್(ಅ. 02): ಗಾಂಧಿ ಜಯಂತಿ ದಿನದಂದು ಅಮೆರಿಕದಲ್ಲಿ ದೊಡ್ಡ ಮಾರಣಹೋಮವೇ ನಡೆದಿದೆ. ಮೋಜಿನ ನಗರಿ ಲಾಸ್ ವೆಗಾಸ್'ನಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ಬಂದೂಕುಧಾರಿಯೊಬ್ಬ ಭೀಕರ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಹತ್ತಾರು ಮಂದಿ ದಾರುಣ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ 50 ಜನರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಆರೋಪಿಯನ್ನು ಸ್ಟೀಫನ್ ಪ್ಯಾಡಾಕ್ ಎಂದು ಶಂಕಿಸಲಾಗಿದ್ದು, ಪೊಲೀಸರು ಆತನನ್ನು ಹತ್ಯೆಗೈದಿದ್ದಾರೆ.
ಸಾವಿರಾರು ಜನರು ಸಂಗೀತದ ಆಸ್ವಾದನೆ ಮಾಡುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಸಮೀಪದ ಹೋಟೆಲ್'ವೊಂದರ 32ನೇ ಕೊಠಡಿಯಿಂದ ಆರೋಪಿಯು ಮನಬಂದಂತೆ ಗುಂಡಿನ ಮಳೆಗೆರೆದಿದ್ದಾನೆ. ದಿಢೀರ್ ಗುಂಡಿನ ದಾಳಿಗೆ ಬೆಚ್ಚಿ ಬಿದ್ದ ಜನರು ಚೀರಾಡುತ್ತಾ ಚೆಲ್ಲಾಪಿಲ್ಲಿಯಾಗಿದ್ದಾರೆ. ನೂಕುನುಗ್ಗಲಿನಿಂದಲೇ ಹಲವು ಮಂದಿ ಸಾವನ್ನಪ್ಪಿದ್ದಾರೆ. ರಕ್ತಸಿಕ್ತಗೊಂಡ ಜನರು ಆತಂಕದಿಂದ ಬೀದಿಬೀದಿ ಅಲೆಯುತ್ತಿದ್ದ ಕರುಣಾಜನಕ ದೃಶ್ಯ ಆ ಪ್ರದೇಶದಲ್ಲಿತ್ತು.
ಅಮೆರಿಕದ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ಶೂಟೌಟ್ ಪ್ರಕರಣವೆನಿಸಿದೆ. ಕಳೆದ ವರ್ಷ ಆರ್ಲಾಂಡೋದ ನೈಟ್'ಕ್ಲಬ್'ನಲ್ಲಿ ನಡೆದ ಶೂಟೌಟ್'ನಲ್ಲಿ 49 ಜನರು ಬಲಿಯಾಗಿದ್ದರು. ಈಗ ಲಾಸ್ ವೆಗಾಸ್ ಶೂಟೌಟ್'ನಲ್ಲಿ 50ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಗಾಯಾಳುಗಳ ಪ್ರಮಾಣ ಗಮನಿಸಿದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಇದೆ.
ಆರೋಪಿ ಸ್ಟೀಫನ್ ಪ್ಯಾಡೋಕ್ ಯಾಕೆ ಈ ಹಿಂಸಾಚಾರ ನಡೆಸಿದ ಎಂಬ ಕಾರಣ ಗೊತ್ತಾಗಿಲ್ಲ. ಪೊಲೀಸರ ಪ್ರಕಾರ ಸ್ಟೀಫನ್ ಒಬ್ಬನೇ ಈ ಕೃತ್ಯ ಎಸಗಿರುವ ಶಂಕೆ ಇದೆ. ಅಲ್ಲದೇ, ಆತ ಯಾವುದೇ ಉಗ್ರ ಗುಂಪಿಗೆ ಸೇರಿಲ್ಲವೆಂದು ನಂಬಲಾಗಿದೆ. ಆದರೆ, ಆರೋಪಿ ಸ್ಟೀಫನ್ ಪ್ಯಾಡೋಕ್ ಜೊತೆ ಆತನ ರೂಮಿನಲ್ಲಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಶೋಧಿಸುತ್ತಿದ್ದಾರೆ. ಆ ಮಹಿಳೆಯು ಏಷ್ಯಾ ಮೂಲದ ಮಾರಿಲೋ ಡ್ಯಾನ್ಲೀ ಎಂದು ಹೇಳಲಾಗುತ್ತಿದೆ. ಸುಮಾರು 4 ಅಡಿ 11 ಅಂಗುಲ ಎತ್ತರದ ಮಾರಿಲೋಗೂ ಸ್ಟೀಫನ್ ಪ್ಯಾಡೋಕ್'ಗೂ ಏನು ಸಂಬಂಧವಿತ್ತು ಎಂಬುದು ಗೊತ್ತಾಗಿಲ್ಲ. ಆ ಮಹಿಳೆ ಸಿಕ್ಕಲ್ಲಿ ಪ್ರಕರಣದ ಬಗ್ಗೆ ಹೆಚ್ಚು ಮಾಹಿತಿ ಗೊತ್ತಾಗಬಹುದು.