ಉಪರಾಷ್ಟ್ರಪತಿ ವಾಹನ ತೆರಳುವಾಗ ಟ್ರಿನಿಟಿ ವೃತ್ತದಲ್ಲಿ ಸಿಲುಕಿದ್ದ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡುವ ಮೂಲಕ ಭಾನುವಾರ ಸಂಚಾರ ಪೊಲೀಸರು ಮಾನವೀಯತೆ ಮರೆದಿದ್ದಾರೆ.

ಬೆಂಗಳೂರು(ಆ.07): ಉಪರಾಷ್ಟ್ರಪತಿ ವಾಹನ ತೆರಳುವಾಗ ಟ್ರಿನಿಟಿ ವೃತ್ತದಲ್ಲಿ ಸಿಲುಕಿದ್ದ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡುವ ಮೂಲಕ ಭಾನುವಾರ ಸಂಚಾರ ಪೊಲೀಸರು ಮಾನವೀಯತೆ ಮರೆದಿದ್ದಾರೆ.

ಭಾನುವಾರ ಬೆಳಗ್ಗೆ ಹೊಸಕೆರೆಹಳ್ಳಿಯಲ್ಲಿ ರುವ ಪಿಇಎಸ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಳ್ಳಲು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ನಗರಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಮರಳುವಾಗ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಟ್ರಿನಿಟಿ ವೃತ್ತದಲ್ಲಿ ಸಂಚಾರ ಪೊಲೀ ಸರು ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಿದ್ದರು. ಈ ಮಧ್ಯೆ ರೋಗಿ ಇದ್ದ ಆ್ಯಂಬುಲೆನ್ಸ್ ಬಂದಿದ್ದು, ಪೊಲೀಸರು ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ರೋಗಿಯೊಬ್ಬರನ್ನು ಆ್ಯಂಬುಲೆನ್ಸ್ ಮೂಲಕ ಹಾಸ್ಮೆಟ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಉಪರಾಷ್ಟ್ರಪತಿಗಳು ಏರ್ ಪೋರ್ಟ್‌ಗೆ ತೆರಳುತ್ತಿದ್ದರು. ಕೂಡಲೇ ಆ್ಯಂಬುಲೆನ್ಸ್ ತೆರಳಲು ಅವಕಾಶ ಮಾಡಿಕೊಡಲಾಯಿತು ಎಂದು ಸಂಚಾರ ವಿಭಾಗದ ಡಿಸಿಪಿ ಅಭಿಷೇಕ್ ಗೊಯೆಲ್ ತಿಳಿಸಿದರು.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಂದಿನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಾಹನಗಳು ಹೊರಡುವ ವೇಳೆ ಸಂಚಾರ ಪೊಲೀಸರು ಆ್ಯಂಬುಲೆನ್ಸ್ ತಡೆದು ಸಾರ್ವಜನಿಕರ ಆಕ್ರೋ ಶಕ್ಕೆ ಗುರಿಯಾಗಿದ್ದರು.