Asianet Suvarna News Asianet Suvarna News

ಮೆಟ್ರೋ ಪ್ರಯಾಣಿಕರಿಗೆ ತುರ್ತು ಚಿಕಿತ್ಸೆ ವ್ಯವಸ್ಥೆಗಾಗಿ ಆ್ಯಂಬುಲೆನ್ಸ್

ತುರ್ತು ಸೇವೆಗೆ ಮೆಜೆಸ್ಟಿಕ್‌ನಲ್ಲಿ ಆ್ಯಂಬುಲೆನ್ಸ್ ವ್ಯಾನ್, ಬೈಕ್ ಸದಾ ಸಿದ್ಧ | ಎಲ್ಲ ನಿಲ್ದಾಣದಲ್ಲೂ ಸ್ಟೇಷನ್ ಕಂಟ್ರೋಲರ್ ಬಳಿ ಪ್ರಥಮ ಚಿಕಿತ್ಸೆ ಕಿಟ್ | ಮೆಟ್ರೋ ಪ್ರಯಾಣಿಕರಿಗೆ ತುರ್ತು ಚಿಕಿತ್ಸೆ ವ್ಯವಸ್ಥೆಗಾಗಿ ಅ್ಯಂಬುಲೆನ್ಸ್ 

Ambulance facility will provide to Namma Metro passengers
Author
Bengaluru, First Published Oct 15, 2018, 8:47 AM IST
  • Facebook
  • Twitter
  • Whatsapp

ಬೆಂಗಳೂರು (ಅ. 15): ನಮ್ಮ ಮೆಟ್ರೋ ಪ್ರಯಾಣಿಕರಿಗೆ ತುರ್ತು ಆರೋಗ್ಯ ಚಿಕಿತ್ಸೆಗೆ ಅನುಕೂಲ ಕಲ್ಪಿಸಲು ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಆ್ಯಂಬುಲೆನ್ಸ್ ವ್ಯಾನ್ ಮತ್ತು ಬೈಕ್ ಆ್ಯಂಬುಲೆನ್ಸ್ ಸೇವೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಆರಂಭಿಸಿದೆ.

ಯಲಚೇನಹಳ್ಳಿ- ನಾಗಸಂದ್ರ (ಹಸಿರು ಮಾರ್ಗ)ದಲ್ಲಿ ದಿನಕ್ಕೆ ಅಂದಾಜು 1.65 ಲಕ್ಷ ಮತ್ತು ಬೈಯ್ಯಪ್ಪನಹಳ್ಳಿ- ಮೈಸೂರು ರಸ್ತೆ (ನೇರಳೆ ಮಾರ್ಗ)ಯಲ್ಲಿ ಸುಮಾರು 1.90 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೀಗೆ ನಮ್ಮ ಮೆಟ್ರೋ ರೈಲಿನಲ್ಲಿ ಪ್ರತಿ ದಿನ 3.6 ಲಕ್ಷದಿಂದ 4 ಲಕ್ಷಕ್ಕೂ ಅಧಿಕ ಮಂದಿ  ಪ್ರಯಾಣಿಸುತ್ತಾರೆ. ಆದ್ದರಿಂದ ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ತುರ್ತು ಆರೋಗ್ಯ ಸೇವೆ ಒದಗಿಸಬೇಕೆಂಬ ಒತ್ತಾಯ ಹಲವು ವರ್ಷಗಳಿಂದ ಇತ್ತು.

ಇದೀಗ ತುರ್ತು ಆರೋಗ್ಯ ಸೇವೆಯ ಅಗತ್ಯತೆ ಮನಗಂಡಿರುವ ಬಿಎಂಆರ್‌ಸಿಎಲ್ ಮೆಜೆಸ್ಟಿಕ್ ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಲ್ಲಿ ಆ್ಯಂಬುಲೆನ್ಸ್ ಮತ್ತು ಬೈಕ್ ಆ್ಯಂಬುಲೆನ್ಸ್ ಸೇವೆ ಪ್ರಾರಂಭಿಸಿದೆ. ಈವರೆಗೆ ಆರೋಗ್ಯ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಕೆಲವು ಘಟನೆಗಳು ನಗರದ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ನಡೆದಿವೆ.

ಮಹಿಳೆಯರು, ಮಕ್ಕಳು, ವೃದ್ಧರು ಹೆಚ್ಚಾಗಿ ಮೆಟ್ರೋ ಆವಲಂಬಿಸುತ್ತಿದ್ದಾರೆ. ಜನದಟ್ಟಣೆ ಕಾರಣದಿಂದ ಎಲ್ಲ ವರ್ಗದ ಜನರು ಮೆಟ್ರೋಗೆ ಮೊರೆ ಹೋಗುತ್ತಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಕಾರಣಗಳಿಂದ ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆಯೂ ನಮ್ಮ ಮೆಟ್ರೋ ನಿಗಮದ ಹೊಣೆ. ಆದ್ದರಿಂದ ಈ ಸೌಲಭ್ಯವನ್ನು ಮೊದಲ ಬಾರಿಗೆ ಕೆಂಪೇಗೌಡ ಮೆಟ್ರೋ ರೈಲು ನಿಗಮದಲ್ಲಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇತರ ನಿಲ್ದಾಣಗಳಲ್ಲಿಯೂ ಪ್ರಾರಂಭಿಸಲಾಗುವುದು ಎಂದು ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹಿಳೆಯರಿಗೆ ಪ್ರತ್ಯೇಕ ಬೋಗಿಯ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದೆವು. ಈಗ ಆರು ಬೋಗಿಗಳ ಮೆಟ್ರೋ ರೈಲುಗಳ ಸಂಖ್ಯೆ ಹೆಚ್ಚುತ್ತಿದ್ದು, ಆ ಕೊರತೆ ನೀಗಲಿದೆ ಎಂಬ ವಿಶ್ವಾಸ ಬಂದಿದೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಮೆಟ್ರೋ ನಿಗಮದಿಂದ ಆ್ಯಂಬುಲೆನ್ಸ್ ಸೇವೆ ನೀಡಿರುವುದು ಒಳ್ಳೆಯದು.

ಆದರೆ ಅದಕ್ಕೂ ಮುಖ್ಯವಾಗಿ ನಗರದ ಎಲ್ಲ ಮೆಟ್ರೋ ನಿಲ್ದಾಣ ಗಳಲ್ಲಿ ಪ್ರಥಮ ಚಿಕಿತ್ಸೆ (ಫಸ್ಟ್ ಏಡ್) ಸೌಲಭ್ಯ ಅಳವಡಿಸಬೇಕಿತ್ತು. ಯಾವ ನಿಲ್ದಾಣದಲ್ಲಿಯೂ ಪ್ರಯಾಣಿಕರ ಕಣ್ಣಿಗೆ ಕಾಣುವಂತೆ ಎಲ್ಲಿಯೂ ಪ್ರಥಮ ಚಿಕಿತ್ಸೆ ಬಾಕ್ಸ್ ಇಟ್ಟಿಲ್ಲ. ಎಲ್ಲರಿಗೂ ಕಾಣುವಂತೆ ಸೌಲಭ್ಯ ನೀಡಿದ್ದರೆ ಒಳ್ಳೆಯದಿತ್ತು ಎನ್ನುತ್ತಾರೆ ಖಾಸಗಿ ಕಂಪನಿ ಉದ್ಯೋಗಿ ಸುನೀತಾ ರಾಯ್ಕರ್. 

ಆರೋಗ್ಯ ಸಮಸ್ಯೆ ಆದ್ರೆ ಗಾರ್ಡ್‌ಗೆ ತಿಳಿಸಿ

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು, ಮೆಟ್ರೋ ನಿಲ್ದಾಣಗಳಲ್ಲಿ ಎಲ್ಲೆಡೆ ಪ್ರಥಮ ಚಿಕಿತ್ಸೆ ಬಾಕ್ಸ್‌ಗಳನ್ನು ಇಟ್ಟಿಲ್ಲ. ಆದರೆ, ಪ್ರಥಮ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ವೈದ್ಯಕೀಯ ಸೌಲಭ್ಯ
ಆಯಾ ನಿಲ್ದಾಣಗಳ ಸ್ಟೇಷನ್ ಕಂಟ್ರೋಲರ್ ಅವರಲ್ಲಿಯೇ ಇರುತ್ತದೆ. ಪ್ರಯಾಣಿಕ ರಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದರೆ ಅಥವಾ ಗಾಯಗಳಾದರೆ ನಿಲ್ದಾಣದ ಭದ್ರತಾ ಸಿಬ್ಬಂದಿ ನಿಲ್ದಾಣದ ನಿಯಂತ್ರಕ (ಸ್ಟೇಷನ್ ಕಂಟ್ರೋಲರ್)ರಿಗೆ ಮಾಹಿತಿ ನೀಡುತ್ತಾರೆ.

ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಚಿಕಿತ್ಸೆ ಸೌಲಭ್ಯ ಒದಗಿಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ತುರ್ತು ಸೇವೆಗಳ ಸಹಕಾರ ಪಡೆದುಕೊಳ್ಳುತ್ತೇವೆ. ನಿಲ್ದಾಣಗಳಲ್ಲಿ ಯಾವುದೇ ತುರ್ತು ಸೇವೆ ಅಗತ್ಯವಾದರೆ ಗಾರ್ಡ್‌ಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

Follow Us:
Download App:
  • android
  • ios