ಮಥುರಾ [ಫೆ.19]  : ಮೃತ ದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಒಂದು ಕಾರಿಗೆ ಡಿಕ್ಕಿಯಾಗಿ ಸ್ಥಳದಲ್ಲೇ 7 ಮಂದಿ ದುರ್ಮರಣವನ್ನಪ್ಪಿದ್ದಾರೆ. 

ಉತ್ತರ ಪ್ರದೇಶದ ಮಥುರಾ ಬಳಿಯ ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ  ಫೆ.19ರ ಮಂಗಳವಾರ ಭೀಕರ ಅಪಘಾತ ಸಂಭವಿಸಿದೆ. 

 ರಸ್ತೆ ಡಿವೈಡರ್ ಬಳಿ ಕ್ರಾಸ್ ಮಾಡುವಾಗ ವೇಗವಾಗಿ ಬಂದ ಆ್ಯಂಬುಲೆನ್ಸ್ ಐ10 ಕಾರಿಗೆ ಏಕಾಏಕಿ ಡಿಕ್ಕಿ ಹೊಡೆದಿದ್ದು,  7 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 

ಅಪಘಾತದ ವೇಳೆ ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. 

ಆ್ಯಂಬುಲೆನ್ಸ್ ಬಿಹಾರದಿಂದ ದಿಲ್ಲಿಗೆ ತೆರಳುತ್ತಿದ್ದ ವೇಳೆ ಥಾಣೆಯಿಂದ 138 ಕಿ.ಮೀ ದೂರದಲ್ಲಿ ಅಪಘಾತವಾಗಿದೆ. ಆ್ಯಂಬುಲೆನ್ಸ್ ರಾಂಗ್ ಸೈಡ್ ನಲ್ಲಿ ತೆರಳುತ್ತಿದ್ದುದೆ ಅವಘಡಕ್ಕೆ ಕಾರಣವಾಗಿದ್ದು, ಆ್ಯಂಬುಲೆನ್ಸ್ ಚಾಲಕ ನಿದ್ದೆ ಮಂಪರಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.