Asianet Suvarna News Asianet Suvarna News

ಜಯಂತಿಯನ್ನು ಎಳೆದು ಕಿಸ್ ಕೊಟ್ಟಿದ್ದ ಅಂಬಿ !

ನನ್ನನ್ನು ತಮ್ಮ ಮನೆಗೆ ಕರೆದರು. ಅಲ್ಲಿಗೆ ಹೋದ ನಾನು, ರಾಜಕುಮಾರ್ಅವರಿಗೆ ಎರಡು ಷರತ್ತು ಹಾಕಿದೆ.

Ambi speak about his Film life journey
  • Facebook
  • Twitter
  • Whatsapp

ಬೆಂಗಳೂರು(ಏ.17):‘ಮಸಣದ ಹೂ' ಚಿತ್ರದಲ್ಲಿ ಹಿರಿಯ ನಟಿ ಜಯಂತಿ ವೇಶ್ಯಾವಾಟಿಕೆ ನಡೆಸುವ ಮಹಿಳೆ ಪಾತ್ರ ನಿರ್ವಹಿಸಿದ್ದರು. ಚಿತ್ರದಲ್ಲಿ ನಾನು ಅವರ ಬಳಿ ಹೋಗಿ ಕೆಲಸ ಕೇಳಿದರೆ, ಅವರು ನನ್ನಿಂದ ಮುತ್ತು ಕೇಳ್ತಾರೆ. ಅದರಿಂದ ನಾನು ದಿಗ್ಭ್ರಮೆಯಾಗುತ್ತೇನೆ. ಒಂದು ಹೆಣ್ಣಿಗೆ ಮುತ್ತು ಕೊಡೋಕೆ ಆಗದವನು ಇನ್ನೇನು ಕೆಲಸ ಮಾಡುತ್ತಾನೆ; ಹೋಗ್‌ ಹೋಗ್‌... ಎಂದು ಗದರಿದಾಗ ಟಕ್‌ ಅಂತ ಜಯಂತಿನ ಎಳೆದುಕೊಂಡು ಕಿಸ್‌ ಕೊಟ್ಟೆ'.
-ಹೀಗೆಂದು ಚಿತ್ರೀಕರಣದ ಸಂದರ್ಭದಲ್ಲಿ ನಡೆದಿದ್ದ ಘಟನೆಯೊಂದನ್ನು ಸ್ಮರಿಸಿದವರು ರೆಬೆಲ್‌ ಸ್ಟಾರ್‌ ಅಂಬರೀಷ್‌. ಇದಕ್ಕೆ ವೇದಿಕೆಯಾಗಿದ್ದು ನಗರದ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣ.
ಖಿಂಚಾ ಸಭಾಂಗಣದಲ್ಲಿ ಭಾನುವಾರ ಡಾ.ಬಿ.ಸರೋಜಾ ದೇವಿ ರಾಷ್ಟ್ರೀಯ ಪ್ರಶಸ್ತಿಯನ್ನು ಹಿರಿಯ ನಟಿ ಜಯಂತಿ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಅಂಬರೀಷ್‌ ಅವರು ಜಯಂತಿ ಅವರೊಂದಿಗೆ ನಟಿಸಿದ ಸಂದರ್ಭದಲ್ಲಿನ ಕ್ಷಣಗಳನ್ನು ನೆನೆದರು.ಹಾಗೆಯೇ, ವರನಟ ರಾಜ್‌ಕುಮಾರ್‌ ಚಿತ್ರರಂಗಕ್ಕೆ ಬಂದು 25 ವರ್ಷಗಳ ಬಳಿಕ ನಾನು ಅವರೊಂದಿಗೆ ನಟಿಸಿದೆ. ‘ಒಡಹುಟ್ಟಿದವರು' ಚಿತ್ರದ ಕಥೆ ಕೇಳಲು ರಾಜಕುಮಾರ್‌ ಅವರು, ನನ್ನನ್ನು ತಮ್ಮ ಮನೆಗೆ ಕರೆದರು. ಅಲ್ಲಿಗೆ ಹೋದ ನಾನು, ರಾಜಕುಮಾರ್‌ ಅವರಿಗೆ ಎರಡು ಷರತ್ತು ಹಾಕಿದೆ. ಸರ್‌ ಚಿತ್ರದಲ್ಲಿ ನಾನು ನಿಮ್ಮನ್ನು, ನೀವು ನನ್ನನ್ನು ಹೊಡೆಯುವ ಅಥವಾ ಬೈಯ್ಯುವ ದೃಶ್ಯಗಳು ಇರಬಾರದು. ಅದನ್ನು ಬಿಟ್ಟು ಕಸಗುಡಿಸೋಕೆ ಹೇಳಿದರೂ ಅದನ್ನು ಮಾಡಿ ಹೋಗ್ತೇನೆ ಎಂದು ತಿಳಿಸಿದ್ದೆ ಎಂದರು. ಅಂಬರೀಷ್‌ ಅವರ ಆ ಮಾತು ಕೇಳಿ ಸಭಾಂಗಣದಲ್ಲಿನ ಸಭಿಕರು ನಗೆಗಡಲಲ್ಲಿ ತೇಲಿದರು.
ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟಿ ಜಯಂತಿ ಅವರು, ತಮ್ಮ ಹಾಗೂ ಸರೋಜಾ ದೇವಿ ನಡುವಿನ ಒಡನಾಟ, ಆತ್ಮೀಯತೆಯ ನೆನಪುಗಳನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ನಟಿ ಡಾ.ಸರೋಜಾ ದೇವಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ರಾಜೇಂದ್ರಸಿಂಗ್‌ ಬಾಬು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಭಾರತೀಯ ವಿದ್ಯಾಭವನದ ಅಧ್ಯಕ್ಷ ರಾಮಾನುಜಂ ಮೊದಲಾದವರು ಉಪಸ್ಥಿತರಿದ್ದರು.

Follow Us:
Download App:
  • android
  • ios