ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡು ಬಿಜೆಪಿಯತ್ತ ಒಲವು ಹೊಂದಿದ್ದ ಮಾಜಿ ಸಚಿವ ಅಂಬರೀಶ್‌ ಇದೀಗ ತಮ್ಮ ನಿಲುವು ಬದಲಿಸುವ ಲಕ್ಷಣ ತೋರಿದ್ದು, ಕಾಂಗ್ರೆಸ್‌'ನಲ್ಲೇ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಬೆಂಗಳೂರು(ಮಾ.31): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡು ಬಿಜೆಪಿಯತ್ತ ಒಲವು ಹೊಂದಿದ್ದ ಮಾಜಿ ಸಚಿವ ಅಂಬರೀಶ್‌ ಇದೀಗ ತಮ್ಮ ನಿಲುವು ಬದಲಿಸುವ ಲಕ್ಷಣ ತೋರಿದ್ದು, ಕಾಂಗ್ರೆಸ್‌'ನಲ್ಲೇ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಸಚಿವ ಸ್ಥಾನ ಕಳೆದುಕೊಂಡ ಬಳಿಕ ಕೈ ಪಾಳಯದಲ್ಲಿ ‘ರೆಬಲ್‌' ಆದ ಅಂಬರೀಶ್‌ ಬಂಡಾಯವನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಪಕ್ಷದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಮಂಡ್ಯ ರಾಜಕಾರಣದಲ್ಲಿ ಕೃಷ್ಣ ಮತ್ತು ಅಂಬರೀಶ್‌ ವಿರೋಧಿಗಳು. ಇಬ್ಬರು ನಾಯಕರು ಬಿಜೆಪಿಗೆ ಸೇರಿದರೆ ಇದುವರೆಗೂ ಕಾಂಗ್ರೆಸ್‌ನಲ್ಲಿದ್ದ ಬಣ ರಾಜಕಾರಣ ಬಿಜೆಪಿಗೂ ಮುಂದುವರಿದಂತಾಗುತ್ತದೆ. ಈ ಹಿಂಜರಿಕೆ ಅಂಬರೀಶ್‌ಗೆ ಇದೆ ಎನ್ನಲಾಗಿದೆ.

ಅಲ್ಲದೆ, ಬಿಜೆಪಿಯಿಂದ ಟಿಕೆಟ್‌ ಪಡೆದು ಮಂಡ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಸುಲಭದ ಮಾತಲ್ಲ. ಹೀಗಾಗಿ ಮಂಡ್ಯದಲ್ಲಿ ನೆಲೆಗಟ್ಟು ಹೊಂದಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಗೆಲುವು ದಾಖಲಿಸಬಹುದು. ಹೀಗಾಗಿ ಸದ್ಯ ಕಾಂಗ್ರೆಸ್‌ನಲ್ಲೇ ಮುಂದುವರಿಯಲು ನಿರ್ಧರಿಸಿರುವ ಅಂಬರೀಶ್‌ ಚುನಾವಣೆ ಸಮೀಪಿಸಿದಾಗ ಸೂಕ್ತ ನಿರ್ಧಾರ ಕೈಗೊಳ್ಳುವ ಮನಸ್ಸು ಮಾಡಿದ್ದಾರೆ ಎಂದು ಅವರ ಆಪ್ತ ವಲಯಗಳು ಹೇಳಿವೆ.

ವರದಿ: ಕನ್ನಡ ಪ್ರಭ