ಸುಷ್ಮಾ ಸ್ವರಾಜ್ ಅವರು ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೂಲಕ ಅಮೇಜಾನ್ ಸಂಸ್ಥೆಯ ಮೇಲೆ ಒತ್ತಡ ಹೇರಿದರು.
ವಾಷಿಂಗ್ಟನ್(ಜ. 12): ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮಧ್ಯಪ್ರವೇಶದ ಬಳಿಕ ಭಾರತದ ತ್ರಿವರ್ಣಧ್ವಜ ಮಾದರಿ ವಿನ್ಯಾಸದ ಡೋರ್'ಮ್ಯಾಟ್'ಗಳ ಮಾರಾಟವನ್ನು ಅಮೇಜಾನ್ ಸಂಸ್ಥೆ ಹಿಂಪಡೆದುಕೊಂಡಿದೆ. ಆನ್'ಲೈನ್ ಮಾರಾಟ ಸಂಸ್ಥೆಯಾದ ಅಮೇಜಾನ್'ನ ಕೆನಡಾ ಆವೃತ್ತಿಯಲ್ಲಿ ಇಂತಹ ಡೋರ್'ಮ್ಯಾಟ್'ಗಳನ್ನು ಮಾರಾಟಕ್ಕಿಡಲಾಗಿತ್ತು. ಭಾರತದ ರಾಷ್ಟ್ರಧ್ವಜದ ಮಾದರಿಯಲ್ಲಿದ್ದ ಈ ಡೋರ್'ಮ್ಯಾಟ್'ಗಳನ್ನು ಮೇಯರ್ಸ್ ಫ್ಲ್ಯಾಗ್ ಡೋರ್'ಮ್ಯಾಟ್ ಹಾಗೂ ಎಕ್'ಎಲ್'ವೈಎಲ್ ಎಂಬ ಸಂಸ್ಥೆಗಳು ತಯಾರಿಸಿದ್ದು, ಅವುಗಳನ್ನು ಅಮೇಜಾನ್ ಕೆನಡಾ ತನ್ನ ತಾಣದಲ್ಲಿ ಮಾರಾಟಕ್ಕೆ ಅವಕಾಶ ನೀಡಿತ್ತು. ಭಾರತದ ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿಯಲ್ಲಿರುವ ಈ ಡೋರ್'ಮ್ಯಾಟ್'ಗಳ ಪ್ರದರ್ಶನಕ್ಕೆ ಭಾರತೀಯರನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದವು. ಬಳಿಕ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೂಲಕ ಅಮೇಜಾನ್ ಸಂಸ್ಥೆಯ ಮೇಲೆ ಒತ್ತಡ ಹೇರಿದರು. ಅಮೇಜಾನ್'ನ ಯಾವುದೇ ಸಿಬ್ಬಂದಿಗೆ ಭಾರತದ ವೀಸಾ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪರಿಣಾಮವಾಗಿ, ಇಂದು ಅಮೇಜಾನ್ ಕೆನಡಾ ವೆಬ್'ತಾಣದಿಂದ ಈ ವಿವಾದಿತ ಡೋರ್'ಮ್ಯಾಟ್'ಗಳ ಮಾರಾಟವನ್ನು ಹಿಂಪಡೆಯಲಾಗಿದೆ.
