ವಿಶೇಷ ಅಂಗಡಿ ತೆರೆದ ದೈತ್ಯ ಅಮೆಜಾನ್

First Published 24, Jan 2018, 9:08 AM IST
Amazon Go concept store opens to public ditching registers for smartphone App and cameras
Highlights

ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಸ್ವಾಗತ ಕೋರುವವರು, ಸೇಲ್ಸ್‌ಮನ್‌ಗಳು, ಕ್ಯಾಶಿಯರ್‌ಗಳು ಇರುವ ಚಿತ್ರಣ ಸಹಜ. ಆದರೆ ಅಂಗಡಿಯೊಳಗೆ ವಸ್ತುಗಳನ್ನು ಬಿಟ್ಟರೆ ಇನ್ಯಾವುದೇ ಸಂಗತಿ ಇರದ ವಿಶ್ವದ ಮೊದಲ ಮಳಿಗೆಯೊಂದನ್ನು ರಿಟೇಲ್ ದೈತ್ಯ ಅಮೆಜಾನ್, ಅಮೆರಿಕದ ಸಿಯಾಟೆಲ್‌ನಲ್ಲಿ ಆರಂಭಿಸಿದೆ.

ಸಿಯಾಟಲ್: ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಸ್ವಾಗತ ಕೋರುವವರು, ಸೇಲ್ಸ್‌ಮನ್‌ಗಳು, ಕ್ಯಾಶಿಯರ್‌ಗಳು ಇರುವ ಚಿತ್ರಣ ಸಹಜ. ಆದರೆ ಅಂಗಡಿಯೊಳಗೆ ವಸ್ತುಗಳನ್ನು ಬಿಟ್ಟರೆ ಇನ್ಯಾವುದೇ ಸಂಗತಿ ಇರದ ವಿಶ್ವದ ಮೊದಲ ಮಳಿಗೆಯೊಂದನ್ನು ರಿಟೇಲ್ ದೈತ್ಯ ಅಮೆಜಾನ್, ಅಮೆರಿಕದ ಸಿಯಾಟೆಲ್‌ನಲ್ಲಿ ಆರಂಭಿಸಿದೆ.

ಈ ಅಂಗಡಿಯಲ್ಲಿ ಸ್ವಾಗತಕಾರರು, ಕ್ಯಾಶಿಯರ್ ಯಾರೂ ಇರುವುದಿಲ್ಲ. ನೀವು ಅಂಗಡಿಯೊಳಗೆ ಹೋಗಿ, ಬೇಕಾದ ವಸ್ತುಗಳನ್ನು ಖರೀದಿಸಿ ಹೊರಬಂದರೆ ಮುಗಿಯಿತು. ನಿಮ್ಮ ಅಕೌಂಟ್‌ನಿಂದ, ನೀವು ಖರೀದಿಸಿದ ವಸ್ತುಗಳಿಗೆ ಹಣ ತಂತಾನೆ ಕಡಿತಗೊಳ್ಳುತ್ತದೆ. ಕಂಪ್ಯೂಟರ್ ಸ್ಕ್ಯಾನಿಂಗ್, ಬಾರ್‌ಕೋಡ್ ಸ್ಕ್ಯಾನರ್, ಕ್ಯಾಮೆರಾ, ಸೆನ್ಸರ್‌ಗಳ ಮೂಲಕವೇ ಕಾರ್ಯನಿರ್ವಹಿಸುವ ‘ಅಮೆಜಾನ್ ಗೋ’ ಹೆಸರಿನ ಈ ಹೊಸ ಮಳಿಗೆ ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ.

ಹೇಗೆ ಕಾರ್ಯನಿರ್ವಹಿಸುತ್ತದೆ?: ಈ ಅಂಗಡಿಗೆ ತೆರಳಬಯಸುವವರು ಮೊದಲು ತಮ್ಮ ಅಮೆಜಾನ್ ಗೋ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಆ್ಯಪ್‌ಗೆ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಬೇಕು. ಈ ಆ್ಯಪ್ ಹೊಂದಿರುವ ಮೊಬೈಲ್ ಅನ್ನು ಮಳಿಗೆ ಬಾಗಿಲ ಬಳಿ ಹಿಡಿದು ಸ್ಕ್ಯಾನ್ ಮಾಡಿದರೆ ಬಾಗಿಲು ತೆರೆದುಕೊಳ್ಳುತ್ತದೆ. ಬಳಿಕ ನೀವು ಪ್ರತಿಯೊಂದು ವಸ್ತುವನ್ನು ರ್ಯಾಂಕ್ನಿಂದ ಎತ್ತಿಕೊಳ್ಳುತ್ತಲೇ, ನಿಮ್ಮ ಹೆಸರಿನಲ್ಲಿ ಪಟ್ಟಿಯೊಂದು ಸಿದ್ಧಗೊಳ್ಳುತ್ತಾ ಹೋಗುತ್ತದೆ.

ನೀವು ಯಾವುದಾದರೂ ವಸ್ತುವನ್ನು ತೆಗೆದುಕೊಂಡು, ಕೊನೆಗೆ ಬೇಡ ಎಂದು ಮರಳಿ ಇಟ್ಟರೆ, ಪಟ್ಟಿಯಿಂದ ಆ ವಸ್ತುವಿನ ಹೆಸರು ರದ್ದಾಗುತ್ತದೆ. ಹೀಗೆ ನಿಮಗೆ ಬೇಕಾದ ವಸ್ತುಗಳನ್ನೆಲ್ಲಾ ಖರೀದಿಸಿದ ಬಳಿಕ ಹೊರಗೆ ಬರುವಾಗ, ಮೆಟ್ರೋ ನಿಲ್ದಾಣದಲ್ಲಿ ಕಾಯಿನ್ ಹಾಕಲು ಇರುವಂಥ ಜಾಗದಲ್ಲಿ ಮೊಬೈಲ್ ಅನ್ನು ಮತ್ತೊಮ್ಮೆ ಸ್ಕ್ಯಾನ್ ಮಾಡಿದರೆ ಆಯಿತು. ನೀವು ಖರೀದಿಸಿದ ಎಲ್ಲಾ ವಸ್ತುಗಳ ಮೌಲ್ಯವನ್ನು ಲೆಕ್ಕ ಹಾಕಿ, ತಕ್ಷಣವೇ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನಿಂದ ಹಣ ಕಡಿತ ಮಾಡಲಾಗುತ್ತದೆ.

loader