ನವ​ದೆ​ಹ​ಲಿ[ಆ.04]: ಅಮ​ರ​ನಾಥ ಯಾತ್ರೆಗೆ ಉಗ್ರರ ಕರಿ​ನೆ​ರಳು ಇರು​ವು​ದ​ರಿಂದ, ಯಾತ್ರೆ ಮೊಟ​ಕು​ಗೊ​ಳಿಸಿ ಆದಷ್ಟುಬೇಗ ಕಾಶ್ಮೀ​ರ ತ್ಯಜಿಸಿ ಎಂದು ಜಮ್ಮು ಕಾಶ್ಮೀ​ರ ಸರ್ಕಾರ ಆದೇಶಿಸಿ​ರು​ವ​ದ​ರಿಂದ ಯಾತ್ರಿ​ಕ​ರಿಗೆ ಸಂಕಷ್ಟ ಎದು​ರಾ​ಗಿದೆ. ಸರ್ಕಾ​ರದ ಆದೇ​ಶ​ದಿಂದ ಸ್ವಂತ ಊರಿಗೆ ಹಿಂದಿ​ರಿ​ಗಲು ಜನ ಏಕಾ​ಏಕಿ ಏರ್‌​ಪೋ​ರ್ಟ್‌ಗೆ ಧಾವಿ​ಸಿದ್ದು, ಶ್ರೀನ​ಗರ ಏರ್‌​ಪೋ​ರ್ಟ್‌ನಲ್ಲಿ ಟಿಕೆಟ್‌ಗಾಗಿ ಎರ​ಡ​ರಿಂದ ಮೂರು ದಿನ ಪರ​ದಾ​ಡು​ವಂತಾ​ಗಿದೆ.

ಇದರ ಜತೆ ವಿಮಾನ ಟಿಕೆ​ಟ್‌​ಗಳ ದರವೂ ಗಗ​ನ​ಕ್ಕೇ​ರಿದ್ದು, ಸಾಧಾ​ರ​ಣ​ವಾಗಿ ಶ್ರೀನ​ಗ​ರ​ದಿಂದ ದೆಹ​ಲಿಗೆ 3000 ರು. ಇದ್ದ ಟಿಕೆಟ್‌ ದರ 10,000 ದಿಂದ 22,000 ಕ್ಕೆ ಏರಿಕೆಯಾ​ಗಿದೆ. ಶ್ರೀನ​ಗ​ರ​ದಿಂದ ಜಮ್ಮು​ವಿಗೆ ವಿಮಾ​ನ​ಯಾನ ಸಂಸ್ಥೆ​ಗಳು 16000 ರು. ವಿಧಿ​ಸು​ತ್ತಿ​ದ್ದರೆ, ಶ್ರೀನ​ಗ​ರ​ದಿಂದ ಅಮೃ​ತ್‌​ಸರ್‌, ಜೈಪುರ ಹಾಗೂ ಚಂಢೀ​ಗ​ಡಕ್ಕೆ ಟಿಕೆಟ್‌ ದರ 10000 ರು. ದಿಂದ 19,000 ರು. ವರೆಗೆ ಏರಿ​ಕೆ​ಯಾ​ಗಿದೆ.

ಇದು ಯಾತ್ರಾ​ರ್ಥಿ​ಗ​ಳಿಗೆ ಗಾಯದ ಮೇಲೆ ಬರೆ ಎಳೆ​ದಂತಾ​ಗಿದೆ. ಕೆಲ ವಿಮಾ​ನ​ಯಾನ ಸಂಸ್ಥೆ​ಗಳು ಟಿಕೆಟ್‌ ರದ್ದು ಹಾಗೂ ಪ್ರಯಾಣ ಮುಂದೂ​ಡಿಕೆ ಶುಲ್ಕ​ವನ್ನು ರದ್ದು​ಗೊ​ಳಿ​ಸಿ​ ಯಾತ್ರಿ​ಗ​ಳಿಗೆ ರಿಲೀಫ್‌ ನೀಡಿದೆ.