‘ನಾನು ಸಂಜಯ ಗಾಂಧಿ ಅವರ ಪುತ್ರಿ. ಇಂದಿರಾ ಗಾಂಧಿ ಅವರ ‘ರಹಸ್ಯ’ ಮೊಮ್ಮಗಳು’. - ಹೀಗೆಂದು ಹೇಳುತ್ತ 48 ವರ್ಷ ವಯಸ್ಸಿನ ಪ್ರಿಯಾ ಸಿಂಗ್ ಪೌಲ್ ಎಂಬ ಮಹಿಳೆ ಈಗ ಪ್ರತ್ಯಕ್ಷಳಾಗಿದ್ದಾಳೆ. ಅಲ್ಲದೆ, ಗಾಂಧಿ ಕುಟುಂಬವನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಆರೋಪಿಸಿ ಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ‘ಇಂದೂ ಸರ್ಕಾರ್’ ಚಿತ್ರಕ್ಕೆ ತಡೆ ನೀಡಬೇಕೆಂದು ಮನವಿ ಸಲ್ಲಿಸಿದ್ದಾಳೆ.

ನವದೆಹಲಿ(ಜು.13): ‘ನಾನು ಸಂಜಯ ಗಾಂಧಿ ಅವರ ಪುತ್ರಿ. ಇಂದಿರಾ ಗಾಂಧಿ ಅವರ ‘ರಹಸ್ಯ’ ಮೊಮ್ಮಗಳು’. - ಹೀಗೆಂದು ಹೇಳುತ್ತ 48 ವರ್ಷ ವಯಸ್ಸಿನ ಪ್ರಿಯಾ ಸಿಂಗ್ ಪೌಲ್ ಎಂಬ ಮಹಿಳೆ ಈಗ ಪ್ರತ್ಯಕ್ಷಳಾಗಿದ್ದಾಳೆ. ಅಲ್ಲದೆ, ಗಾಂಧಿ ಕುಟುಂಬವನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಆರೋಪಿಸಿ ಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ‘ಇಂದೂ ಸರ್ಕಾರ್’ ಚಿತ್ರಕ್ಕೆ ತಡೆ ನೀಡಬೇಕೆಂದು ಮನವಿ ಸಲ್ಲಿಸಿದ್ದಾಳೆ.

‘ನನ್ನ ನಿಜವಾದ ತಂದೆ ಸಂಜಯ ಗಾಂಧಿ. ಆದರೆ ನನ್ನನ್ನು ಬೇರೆಯವರು ದತ್ತು ತೆಗೆದುಕೊಂಡಿದ್ದಾರೆ. ನಾನು ಬೆಳೆದು ದೊಡ್ಡವಳಾದ ನಂತರವಷ್ಟೇ ‘ನೀನು ಸಂಜಯ ಗಾಂಧಿ ಅವರ ಮಗಳು’ ಎಂದು ತಿಳಿಸಲಾಯಿತು’ ಎಂದು ಪ್ರಿಯಾ ಹೇಳಿಕೊಂಡಿದ್ದಾಳೆ. ‘ನನ್ನ ಜನನ ಪ್ರಮಾಣಪತ್ರ ಹಾಗೂ ದತ್ತು ಸಂಬಂಧಿ ಕಾಗದಪತ್ರಗಳನ್ನು ಪಡೆಯಲು ನಾನು ಯತ್ನಿಸುತ್ತಿದ್ದೇನೆ. ಆದರೆ ಸಿನಿಮಾದಲ್ಲಿ ವಿವಾದಿತ ಅಂಶಗಳು ಇರುವ ಮಾಹಿತಿ ಹಿನ್ನೆಲೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದೇನೆ’ ಎಂದು ಆಕೆ ಹೇಳಿದ್ದಾಳೆ.

ಭಂಡಾರ್ಕರ್ ಅವರ ಈ ಚಿತ್ರದಲ್ಲಿ 1975ರಲ್ಲಿ ಇಂದಿರಾ ತುರ್ತುಸ್ಥಿತಿ ಹೇರಿದಾಗಿನ ಪರಿಸ್ಥಿತಿಯ ಚಿತ್ರಣವಿದೆ. ಆದರೆ ಚಿತ್ರದಲ್ಲಿ ಶೇ.30 ನೈಜ ಕತೆ ಹಾಗೂ ಶೇ.70 ಕಟ್ಟುಕತೆ ಇದೆ. ನನ್ನ ಅಪ್ಪ ಹಾಗೂ ಅಜ್ಜಿಯನ್ನು ಕೆಟ್ಟದಾಗಿ ಚಿತ್ರಿಸಿದರೆ ಸುಮ್ಮನೇ ಏಕೆ ಕೂಡಲಿ ಎಂದು ಪ್ರಶ್ನಿಸಿದ್ದಾಳೆ.

‘ನನ್ನ ತಾಯಿ ಅಪ್ರಾಪ್ತೆಯಾಗಿದ್ದಾಗಲೇ ಸಂಜಯ್‌'ರನ್ನು ಮದುವೆಯಾಗಿದ್ದಳು. ಬಳಿಕ ನನ್ನನ್ನು ದತ್ತುವಾಗಿ ನೀಡಿದಳು. ಹೀಗಾಗಿ ನನ್ನ ತಾಯಿಯ ಮದುವೆ ಗೌಪ್ಯವಾಗೇ ಉಳಿಯಿತು’ ಎಂದು ಆಕೆ ಹೇಳಿಕೊಂಡಿದ್ದಾಳೆ. ಈ ಬಗ್ಗೆ ಡಿಎನ್‌ಎ ಪರೀಕ್ಷೆಗೂ ಪ್ರಿಯಾ ಸಿದ್ಧಳಿದ್ದಾಳೆ ಎಂದು ಆಕೆಯ ವಕೀಲ ತನ್ವೀರ್ ನಜೀಂ ಹೇಳಿದ್ದಾರೆ. ಸಂಜಯ ಗಾಂಧಿ ಅವರು ಮನೇಕಾರನ್ನು ವಿವಾಹವಾಗಿದ್ದು, ಅವರಿಗೆ ವರುಣ್ ಗಾಂಧಿ ಏಕೈಕ ಪುತ್ರ ಎಂಬುದು ಈವರೆಗೆ ಗೊತ್ತಾಗಿರುವ ವಿಚಾರ.