ಕೋಲಾರ[ಸೆ.27]: ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎಚ್‌.ಮುನಿಯಪ್ಪ ಅವರ ಸೋಲಿಗೆ ತಾನೇ ಕಾರಣ ಎಂದು ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸ ಗೌಡ ಬಹಿರಂಗವಾಗಿಯೇ ಘೋಷಿಸಿದ್ದಾರೆ. ‘ಮುನಿಯಪ್ಪ ಅವರನ್ನು ಹದ್ದಾಗಿ ಕುಕ್ಕಿ ಸೋಲಿಸಿದ್ದು ನಾನೇ’ ಎಂದು ಹೇಳಿಕೊಂಡಿದ್ದಾರೆ.

ನಗರದಲ್ಲಿ ಗುರುವಾರ ಪತ್ರಕರ್ತರ ಜತೆಗೆ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಮುನಿಯಪ್ಪ ಅವರನ್ನು ಸೋಲಿಸಲು ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೆ. ಇದರಲ್ಲಿ ಮುಚ್ಚುಮರೆ ಏನಿಲ್ಲ ಎಂದರು.

ಹೊಯ್‌ಕೈ: ಸಿದ್ದು, ಮುನಿಯಪ್ಪ ಏಕವಚನ ಜಟಾಪಟಿ!

ಮುನಿಯಪ್ಪ ಅವರನ್ನು ಕಳೆದ ಚುನಾವಣೆಯಲ್ಲಿ ಹದ್ದಾಗಿ ಕುಕ್ಕಿದ್ದು ಯಾರು ಎಂಬ ಪ್ರಶ್ನೆಗೆ ನೇರ ಉತ್ತರ ನೀಡಿದ ಅವರು, ಆ ಕೆಲಸ ಮಾಡಿದವನು ನಾನೇ, ಅವರಿಂದ ನಾನೂ ಎರಡು ಬಾರಿ ಕುಕ್ಕಿಸಿಕೊಂಡಿದ್ದೆ ಅದಕ್ಕೆ ಮುಯ್ಯಿ ತೀರಿಸಿಕೊಂಡಿದ್ದೇನೆ. ಭಯ, ಭಕ್ತಿ ಇಲ್ಲದೆ ಅವರನ್ನು ಸೋಲಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದ್ದೇನೆ ಎಂದರು.

ಚುನಾವಣೆಯಲ್ಲಿ ಹಳ್ಳಿ ಹಳ್ಳಿಗೂ ತೆರಳಿ ಮುನಿಯಪ್ಪಗೆ ವೋಟು ಹಾಕಬೇಡಿ ಎಂದು ಪ್ರಚಾರ ಮಾಡಿದ್ದೆ. ಅವರೂ ನನಗೆ ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಹೀಗೆಯೇ ಮಾಡಿದ್ದರು. ಅದಕ್ಕೆ ಅವರಿಗೂ ಸೋಲಿನ ರುಚಿ ಗೊತ್ತಾಗಲಿ ಎಂದು ಆ ಕೆಲಸ ಮಾಡಿದ್ದೇನೆ. ಇದನ್ನು ನಾನು ಎಲ್ಲಿ ಬೇಕಾದರೂ ಹೇಳುತ್ತೇನೆ, ಈ ವಿಚಾರದಲ್ಲಿ ನನಗೇನೂ ಯಾವುದೇ ಭಯವಿಲ್ಲ ಎಂದರು.

'ಅನರ್ಹ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡುವುದು ನಮ್ಮ ಕರ್ತವ್ಯ'

ಅಲ್ಲದೆ, ಈ ವಿಚಾರವನ್ನು ನಾನು ಪಕ್ಷದ ವರಿಷ್ಠರಿಗೆ ಮೊದಲೇ ತಿಳಿಸಿದ್ದೇನೆ. ನಾನು ಅವರನ್ನು ಬೆಂಬಲಿಸುವುದಿಲ್ಲ ಎಂದು ಕುಮಾರಸ್ವಾಮಿ ಮುಂದೆಯೇ ಹೇಳಿದ್ದೇನೆ ಎಂದು ಶ್ರೀನಿವಾಸಗೌಡ ಸ್ಪಷ್ಟಪಡಿಸಿದರು.