‘ನನ್ನ ಹೆಸರು ಸಿದ್ದ ರಾಮ. ನಾನೂ ಶೇ.100ರಷ್ಟು ಹಿಂದೂ.’ ಬಂಟ್ವಾಳ ಗಲಭೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿಂದೂಗಳನ್ನಷ್ಟೇ ಟಾರ್ಗೆಟ್ ಮಾಡುತ್ತಿದೆ ಎನ್ನುವ ಪ್ರತಿಪಕ್ಷ ಬಿಜೆಪಿ ನಾಯಕರ ಟೀಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದು ಹೀಗೆ. ‘ನಾನು ಅಹಿಂದ ಪರ ಎಂದು ಪದೇ ಪದೆ ಹೇಳಿಕೊಳ್ಳಲು ಯಾವುದೇ ಮುಜುಗರವಿಲ್ಲ’ ಎನ್ನುತ್ತಿದ್ದ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ನಾನೂ ಒಬ್ಬ ಹಿಂದೂ ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಬಾಯ್ಮಿಚ್ಚಿಸುವ ಪ್ರಯತ್ನ ನಡೆಸಿದ್ದಾರೆ.

ಮೈಸೂರು(ಜು.16): ‘ನನ್ನ ಹೆಸರು ಸಿದ್ದ ರಾಮ. ನಾನೂ ಶೇ.100ರಷ್ಟು ಹಿಂದೂ.’ ಬಂಟ್ವಾಳ ಗಲಭೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿಂದೂಗಳನ್ನಷ್ಟೇ ಟಾರ್ಗೆಟ್ ಮಾಡುತ್ತಿದೆ ಎನ್ನುವ ಪ್ರತಿಪಕ್ಷ ಬಿಜೆಪಿ ನಾಯಕರ ಟೀಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದು ಹೀಗೆ. ‘ನಾನು ಅಹಿಂದ ಪರ ಎಂದು ಪದೇ ಪದೆ ಹೇಳಿಕೊಳ್ಳಲು ಯಾವುದೇ ಮುಜುಗರವಿಲ್ಲ’ ಎನ್ನುತ್ತಿದ್ದ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ನಾನೂ ಒಬ್ಬ ಹಿಂದೂ ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಬಾಯ್ಮಿಚ್ಚಿಸುವ ಪ್ರಯತ್ನ ನಡೆಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರು ಮಂಗಳೂರು ಗಲಭೆ ಬಗ್ಗೆ ಪ್ರಶ್ನಿಸುತ್ತಿದ್ದಂತೆ, ಈಗ ಬಿಜೆಪಿಯವರಿಗೆ ಯಾವುದೇ ವಿಷಯಗಳಿಲ್ಲ. ಇದು ಚುನಾವಣಾ ವರ್ಷವಾಗಿರುವುದರಿಂದ ಹಿಂದುತ್ವದ ವಿಷಯವನ್ನು ಪ್ರಸ್ತಾಪಿಸುತ್ತಾ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಯತ್ನಿಸುತ್ತಿದ್ದಾರೆ. ನನ್ನ ಹೆಸರು ಸಿದ್ದ ರಾಮ. ಬಿಜೆಪಿಯವರು ಮಾತ್ರವಲ್ಲ, ನಾನು ಕೂಡ ಶೇ.೧೦೦ ರಷ್ಟು ಹಿಂದು. ಬಿಜೆಪಿಯವರು ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕಿಡಿಕಾರಿದರು.

ಶಾಸಕರನ್ನು ಆರಿಸುವವರು ಜನರು:

ಇದೇ ವೇಳೆ ‘ನಮ್ಮನ್ನು (ಎಚ್‌ಡಿಕೆ, ಬಿಎಸ್‌ವೈ) ಅವರಪ್ಪನಾಣೆಗೂ ಸಿಎಂ ಆಗಲ್ಲ ಎಂದು ವ್ಯಂಗ್ಯವಾಡುವ ಸಿದ್ದರಾಮಯ್ಯ ಮೊದಲು ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ ಗೆದ್ದು ಬರಲಿ’ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೂ ಸಿಎಂ ತಿರುಗೇಟು ನೀಡಿದರು. ‘ಯಾರನ್ನೇ ಆಗಲಿ ಶಾಸಕರನ್ನಾಗಿ ಆರಿಸುವವರು ಜನರೇ ಹೊರತು ಕುಮಾರಸ್ವಾಮಿ, ಯಡಿಯೂರಪ್ಪ ಅಲ್ಲ’ ಎಂದು ವ್ಯಂಗ್ಯವಾಡಿದರು.

2018ರ ಚುನಾವಣೆ ಬಹುಶಃ ನನ್ನ ಕೊನೆ ಚುನಾವಣೆ: ಸಿಎಂ

ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಇದೆ ಎಂದು ಶನಿವಾರ ಪುನರುಚ್ಚರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ವಿಚಾರ ದಲ್ಲಿ ಅಂತಿಮ ತೀರ್ಮಾನವನ್ನು ಹೈಕ ಮಾಂಡ್‌ಗೇ ಬಿಡುವುದಾಗಿ ತಿಳಿಸಿ ದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಐದು ಬಾರಿ ಗೆದ್ದಿದ್ದೇನೆ. ಬಹುಶಃ ಮುಂದಿನ ಚುನಾವಣೆಯೇ ನನಗೆ ಕೊನೆಯದು. ಹೀಗಾಗಿ ನನಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಕ್ಷೇತ್ರದಲ್ಲೇ ಕೊನೆಯದಾಗಿ ಸ್ಪರ್ಧೆ ಮಾಡುವ ಆಸೆ ಇದೆ. ಈ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ ಎಂದರು.