ಇಮ್ರಾನ್ ಖಾನ್ ಅವರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೇ ಅವರ ಪಕ್ಷದ ನಿಷ್ಠೆಯನ್ನು ಸಹ ಸೂಕ್ಷ್ಮವಾಗಿಗಮನಹರಿಸುತ್ತಿದ್ದು, ಮಾಹಿತಿ ಕಲೆ ಹಾಕುವಲ್ಲಿ ನಿರಂತರರಾಗಿದ್ದಾರೆ.

ಬೆಂಗಳೂರು(ಆ.02): ಪಕ್ಷದ ವಿರುದ್ಧ ಬಂಡಾಯ ಸಾರಿದ ಶಾಸಕರಿಗೆ ತಿರುಗೇಟು ನೀಡಲು ರಣತಂತ್ರ ರೂಪಿಸುವಲ್ಲಿ ಮಗ್ನವಾಗಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬಂಡಾಯದ ರೂವಾರಿಯಾಗಿದ್ದ ಶಾಸಕ ಜಮೀರ್ ಅಹಮದ್ ಖಾನ್ ವಿರುದ್ಧ ಅವರ ಬಲಗೈ ಬಂಟನನ್ನೇ ರಾಜಕೀಯ ದಾಳವಾಗಿ ಬಳಸುವತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಗೆ ಜಮೀರ್ ಪರಮಾಪ್ತರೂ ಆಗಿರುವ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಅವರಿಗೆ ಗಾಳ ಹಾಕಿದ್ದು, ಪಾಷಾ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಬಗ್ಗೆ ಒಲವು ಹೊಂದಿದ್ದಾರೆ.

ಇಮ್ರಾನ್ ಪಾಷಾ ಅವರು ಪ್ರತಿ ಹಂತದಲ್ಲಿಯೂ ಜಮೀರ್ ಅಹಮದ್ ಖಾನ್ ಜತೆಯಲ್ಲಿದ್ದು, ಅವರಿಗೆ ಕೆಲಸಗಳಿಗೆ ಶಕ್ತಿ ತುಂಬುತ್ತಿದ್ದರು. ಕಳೆದ ವರ್ಷ ಜಮೀರ್ ಅವರ ಹುಟ್ಟುಹಬ್ಬವನ್ನು ಲಕ್ಷಾಂತರ ರು. ವೆಚ್ಚ ಮಾಡಿ ಆಚರಿಸಿದ್ದರು. ಆದರೆ, ಈ ಬಾರಿ ಮಾತ್ರ ಪಾಷಾ ಅವರು ಹುಟ್ಟುಹಬ್ಬದ ಸಮಾರಂಭದಿಂದದೂರ ಉಳಿದರು. ಈ ಮೂಲಕ ಪಾಷಾ ಅವರು ವ್ಯಕ್ತಿ ನಿಷ್ಠೆಗಿಂತ ಪಕ್ಷದ ನಿಷ್ಠೆ ಮುಖ್ಯ ಎಂಬ ಸಂದೇಶವನ್ನು ಜಮೀರ್ ಸಾರಿದ್ದಾರೆ. ಇದೇ ವೇಳೆ ಪಾಷಾ ಅವರು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿಯಬಹುದು ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲೇ ಅವರಿಂದ ಶಾಸಕ ಜಮೀರ್ ಅಹಮದ್ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತೂ ಕೇಳಿಬಂದಿದೆ.

ಸದ್ಯದ ಮಾಹಿತಿ ಅನುಸಾರ ಜಮೀರ್ ಅಹಮದ್ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ನಿಚ್ಚಳವಾಗಿದೆ. ಮುಂದಿನ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹೀಗಾಗಿ, ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಂಡಿದ್ದ ಜಿ.ಎ.ಬಾವಾ ಅವರನ್ನು ಜೆಡಿಎಸ್‌ನತ್ತ ಸೆಳೆದುಅಭ್ಯರ್ಥಿಯನ್ನಾಗಿಸಬಹುದು ಎಂಬ ಚಿಂತನೆ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿದೆ ಎಂದು ಮೂಲಗಳು ತಿಳಿಸಿವೆ.ಆದರೆ, ದೇವೇಗೌಡರು ಕಾಂಗ್ರೆಸ್ಸಿನಿಂದ ಬಾವಾ ಅವರನ್ನು ಕರೆತಂದು ಕಣಕ್ಕಿಳಿಸುವುದಕ್ಕಿಂದ ಜಮೀರ್ ಜತೆಯಲ್ಲೇ ಇದ್ದ ಇಮ್ರಾನ್ ಪಾಷಾ ಅವರನ್ನು ಅಭ್ಯರ್ಥಿಯನ್ನಾಗಿಸುವುದು ಜಾಣತನದ ನಡೆಯಾದೀತು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಅಂತಿಮವಾಗಿ ಈ ಬಗ್ಗೆ ದೇವೇಗೌಡ ಮತ್ತು ಕುಮಾರಸ್ವಾಮಿಅವರು ಚರ್ಚಿಸಿ ಒಮ್ಮತದ ಅಭಿಪ್ರಾಯಕ್ಕೆ ಬರಲಿದ್ದು, ಆ ನಂತರವೇ ಚಾಮರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದು ನಿರ್ಧಾರವಾಗಲಿದೆ ಎನ್ನಲಾಗಿದೆ.

ಇಮ್ರಾನ್‌ಗೆ ಉಪಮೇಯರ್ ಸ್ಥಾನ?
ಜಮೀರ್ ಅಹಮದ್ ಖಾನ್ ವಿರುದ್ಧ ತೊಡೆ ತಟ್ಟಿರುವ ದೇವೇಗೌಡ ಅವರು ಚಾಮರಾಜಪೇಟೆ ಕ್ಷೇತ್ರವನ್ನು ವೈಯಕ್ತಿಕ ಪ್ರತಿಷ್ಠೆಯನ್ನಾಗಿ ಪರಿಗಣಿಸಿದ್ದು, ಇಮ್ರಾನ್ ಖಾನ್ ಅವರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೇ ಅವರ ಪಕ್ಷದ ನಿಷ್ಠೆಯನ್ನು ಸಹ ಸೂಕ್ಷ್ಮವಾಗಿಗಮನಹರಿಸುತ್ತಿದ್ದು, ಮಾಹಿತಿ ಕಲೆ ಹಾಕುವಲ್ಲಿ ನಿರಂತರರಾಗಿದ್ದಾರೆ. ಪಕ್ಷ ನಿಷ್ಠ ಸಾಬೀತಾದರೆ ಬಿಬಿಎಂಪಿ ಸದಸ್ಯರಾಗಿರುವ ಇಮ್ರಾನ್ ಅವರನ್ನು ಮುಂದಿನ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಉಪಮೇಯರ್ ಚುನಾವಣೆಯಲ್ಲಿ ಕಣಕ್ಕಿಳಿಸುವ ಆಲೋಚನೆಯಲ್ಲಿದ್ದಾರೆ. ಕಾಂಗ್ರೆಸ್‌ನೊಂದಿಗೆ ಮೈತ್ರಿಮುಂದುವರಿಸಿಕೊಂಡು ಉಪಮೇಯರ್ ಹುದ್ದೆ ನೀಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ವರದಿ: ಪ್ರಭುಸ್ವಾಮಿ ನಟೇಕರ್, ಕನ್ನಡಪ್ರಭ


ಪಾದರಾಯನಪುರ ವಾರ್ಡ್‌ನ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ನನ್ನ ಹುಟ್ಟುಹಬ್ಬ ಸಮಾರಂಭಕ್ಕೆ ಗೈರು ಹಾಜರಾಗಿರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ. ಅವರಿಗೆ ಏನೋ ಕೆಲಸ ಇದೆ ಎಂದು ಬಂದಿಲ್ಲ. ಪಾಷಾ ನನ್ನ ಜತೆಗೇ ಇದ್ದಾರೆ
-ಜಮೀರ್ ಅಹಮದ್ ಖಾನ್, ಚಾಮರಾಜಪೇಟೆ ಶಾಸಕ