ಬೆಂಗಳೂರು :   ‘ಹೊಂದಾಣಿಕೆ ಸಾಧ್ಯವಿಲ್ಲದಿದ್ದರೆ ವಿಧಾನಸಭೆ ವಿಸರ್ಜನೆಯೇ ಸೂಕ್ತ’ ಎಂದಿರುವ ಜೆಡಿಎಸ್  ಕಾರ್ಯಾಧ್ಯಕ್ಷ ಬಸವ ರಾಜ ಹೊರಟ್ಟಿಯ ವರ ಹೇಳಿಕೆಯಿಂದಾಗಿ ಪ್ರತಿಪಕ್ಷ ಬಿಜೆಪಿ ಕೈಗೆ ಹೊಸ ಅಸ್ತ್ರ ಸಿಕ್ಕಂತಾಗಿದ್ದು, ಇದನ್ನೇ ಗುರಿಯಾಗಿಸಿಕೊಂಡು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದೆ. ಹೊರಟ್ಟಿ ಹೇಳಿಕೆ ಮೈತ್ರಿ ಸರ್ಕಾರದ ಪತನದ ಮುನ್ಸೂಚನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದರೆ, ಒತ್ತಾಯದ ಮದುವೆ ಯಾಗಿರುವ ಮೈತ್ರಿ ಸರ್ಕಾರ ಶೀಘ್ರದಲ್ಲೇ ಮುರಿದುಬೀಳಲಿದೆ ಎಂದು ಮಾಜಿ ಮುಖ್ಯ  ಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಸರ್ಕಾರದ ಬಗ್ಗೆ ಭವಿಷ್ಯ ಹೇಳಿದರು.  ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಣೆಗೂ ಮುನ್ನವೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿನ ಗೊಂದಲ ಉಲ್ಬಣಗೊಂಡಿದೆ. ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ನಾವು ಹೇಳಿದ್ದೆವು. ಅದೇ ರೀತಿ ಮೈತ್ರಿ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಗೊಂದಲಗಳು ಹೆಚ್ಚುತ್ತಿವೆ ಎಂದರು. 

ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬಸವರಾಜ ಹೊರಟ್ಟಿ ಹಾಗೂ ಎಚ್. ವಿಶ್ವನಾಥ ಒಂದೊಂದು ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇದ್ಯಾವುದಕ್ಕೂ ಪ್ರತಿಕ್ರಿಯಿಸುತ್ತಿಲ್ಲ. ಇದರಿಂದಾಗಿ ಮೈತ್ರಿ ಸರ್ಕಾರ ಉರುಳುವ ಸ್ಥಿತಿ ತಲುಪಿದೆ ಎಂದರು. ಇದೇವೇಳೆ ಮೈತ್ರಿ ಸರ್ಕಾರ ಅಸೆಂಬ್ಲಿ ವಿಸರ್ಜನೆ ಮಾಡಲು ಸಾಧ್ಯವಿಲ್ಲ. ಅದು ಅಷ್ಟು ಸುಲಭವಲ್ಲ.

ರಾಜ್ಯದಲ್ಲಿ ಉಂಟಾಗುವ ಸಂವಿಧಾನಿಕ ಬಿಕ್ಕಟ್ಟಿನ ಬಗ್ಗೆ ರಾಜ್ಯಪಾಲರು ನಿರ್ಧಾರ ಕೈಗೊಳ್ಳುತ್ತಾರೆ. ಮಧ್ಯಂತರ ಚುನಾವಣೆಯನ್ನು ಎದುರಿಸುವ ಪರಿಸ್ಥಿತಿ ರಾಜ್ಯಕ್ಕಿಲ್ಲ. ಯಾರೋ ಹೇಳಿಕೆ ನೀಡಿದರೆ, ಅಸೆಂಬ್ಲಿ ವಿಸರ್ಜನೆ ಆಗುವುದಿಲ್ಲ ಎಂದರು. 

ಎಚ್‌ಡಿಕೆ ಕೆಳಗಿಳಿಸಲು ತಂತ್ರ: ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಸರ್ಕಾರದಲ್ಲಿ ಮಾಜಿ ಸಿದ್ದರಾಮಯ್ಯ ಕೇಂದ್ರೀಕೃತ ರಾಜಕೀಯ ನಡೆಯುತ್ತಿದೆ. ಹೀಗಾಗಿ ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ. ಇಂತಹದರಲ್ಲಿ ಸಿದ್ದರಾಮಯ್ಯ ಎಕ್ಸ್‌ಪರ್ಟ್. ಮೇ ೨೩ರ ಬಳಿಕ ಮೈತ್ರಿ ಸರ್ಕಾರವನ್ನು ಸಿದ್ದರಾಮಯ್ಯ ಸ್ಫೋಟಿಸುತ್ತಾರೆ. ಇದಕ್ಕೆ ಹೊರಟ್ಟಿ ಅವರ ಹೇಳಿಕೆಯೇ ಸಾಕ್ಷಿ ಎಂದರು.