ಹಾವೇರಿ ಜಿಲ್ಲಾ ಪಂಚಾಯ್ತಿಯ ಈ ಹಿಂದಿನ ಸಮಿತಿ, ಸಭಾ ಭವನಕ್ಕೆ ಸಿ.ಎಂ.ಉದಾಸಿ ಅವರ ಹೆಸರನ್ನು ನಾಮಕರಣ ಮಾಡಿದ್ದು, ಇದೇ ಮಾದರಿಯಲ್ಲೇ ಕಾರ್ಯಾಲಯಕ್ಕೂ ಕೆ.ಬಿ.ಕೋಳಿವಾಡ ಅವರ ಹೆಸರನ್ನು ಇಡಬೇಕು ಎಂಬುದು ಸದಸ್ಯರ ವಾದವಾಗಿದೆ. ಒಂದು ವೇಳೆ ಕೋಳಿವಾಡ ಅವರ ಹೆಸರನ್ನು ನಾಮಕರಣ ಮಾಡಲು ಅವಕಾಶ  ನೀಡದಿದ್ದಲ್ಲಿ ಸಭಾಭವನಕ್ಕೆ ಇಟ್ಟಿರುವ ಸಿ.ಎಂ.ಉದಾಸಿ ಅವರ ಹೆಸರನ್ನೂ ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು: ಜಿಲ್ಲಾ ಪಂಚಾಯತ್​ ಕಾರ್ಯಾಲಯಗಳಿಗೆ ಜನ ಪ್ರತಿನಿಧಿಗಳ ಹೆಸರು ಇಡಲು ಅವಕಾಶ ಇಲ್ಲದಿದ್ದರೂ ಹಾವೇರಿ ಜಿಲ್ಲಾ ಪಂಚಾಯ್ತಿಯ ನೂತನ ಕಟ್ಟಡ ಕಾರ್ಯಾಲಯಕ್ಕೆ ಸ್ಪೀಕರ್​ ಕೆ.ಬಿ.ಕೋಳಿವಾಡ ಅವರ ಹೆಸರನ್ನು ಇಡಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಈಗ ವಿವಾದಕ್ಕೀಡಾಗಿದೆ.

2017ರ ಮೇ 15ರಂದು ನಡೆದ ಹಾವೇರಿ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯ ಶಿವಾನಂದ ಕನ್ನಪ್ಪಳವರ ಸಲ್ಲಿಸಿದ್ದ ಪ್ರಸ್ತಾವನೆಗೆ ಉಳಿದ ಸದಸ್ಯರು ಸಹಮತ ವ್ಯಕ್ತಪಡಿಸಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

ಇಡುವಂತಿಲ್ಲ: ಸರ್ಕಾರಿ ಕಚೇರಿ ಕಟ್ಟಡಗಳಿಗೆ ಚುನಾಯಿತ ಪ್ರತಿನಿಧಿಗಳ ಹೆಸರನ್ನು ನಾಮಕರಣ ಮಾಡಲು ಅವಕಾಶವಿಲ್ಲ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸದಸ್ಯರ ಗಮನಕ್ಕೆ ತಂದಿದ್ದರೂ ಸದಸ್ಯರು ಇದನ್ನು ಒಪ್ಪದೇ ಕೆ.ಬಿ.ಕೋಳಿವಾಡ ಅವರ ಹೆಸರನ್ನೇ ಇಡಬೇಕು ಎಂದು ಸಹಮತ ವ್ಯಕ್ತಪಡಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಸದಸ್ಯರ ಒತ್ತಡಕ್ಕೆ ಮಣಿದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಲಿಸಿರುವ ಪ್ರಸ್ತಾವನೆ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಕೋರಲು ಸಚಿವ ಎಚ್​.ಕೆ.ಪಾಟೀಲ್​ ಅವರು ಕಡತವನ್ನು ರವಾನಿಸಲು ಅನುಮೋದಿಸಿರುವುದು ಗೊತ್ತಾಗಿದೆ.

ಹಾವೇರಿ ಜಿಲ್ಲಾ ಪಂಚಾಯ್ತಿಯ ಈ ಹಿಂದಿನ ಸಮಿತಿ, ಸಭಾ ಭವನಕ್ಕೆ ಸಿ.ಎಂ.ಉದಾಸಿ ಅವರ ಹೆಸರನ್ನು ನಾಮಕರಣ ಮಾಡಿದ್ದು, ಇದೇ ಮಾದರಿಯಲ್ಲೇ ಕಾರ್ಯಾಲಯಕ್ಕೂ ಕೆ.ಬಿ.ಕೋಳಿವಾಡ ಅವರ ಹೆಸರನ್ನು ಇಡಬೇಕು ಎಂಬುದು ಸದಸ್ಯರ ವಾದವಾಗಿದೆ. ಒಂದು ವೇಳೆ ಕೋಳಿವಾಡ ಅವರ ಹೆಸರನ್ನು ನಾಮಕರಣ ಮಾಡಲು ಅವಕಾಶ ನೀಡದಿದ್ದಲ್ಲಿ ಸಭಾಭವನಕ್ಕೆ ಇಟ್ಟಿರುವ ಸಿ.ಎಂ.ಉದಾಸಿ ಅವರ ಹೆಸರನ್ನೂ ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್​ ಮತ್ತು ಪಂಚಾಯತ್​ ರಾಜ್​ ಕಾಯ್ದೆ 1993ರ ಪ್ರಕರಣ 197(2) ಹಾಗೂ (3)ರ ಪ್ರಕಾರ ಇಂತಹ ನಿರ್ಣಯಗಳನ್ನು ಅಂಗೀಕರಿಸಲು ಅವಕಾಶಗಳಿಲ್ಲ. ಆದರೂ ಜಿಲ್ಲಾ ಪಂಚಾಯ್ತಿ ಸದಸ್ಯರು ಸ್ಪೀಕರ್​ ಕೋಳಿವಾಡ ಅವರ ಹೆಸರನ್ನೇ ಕಾರ್ಯಾಲಯಕ್ಕೆ ನಾಮಕರಣ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆಯಿಂದ ತಿಳಿದು ಬಂದಿದೆ.

ವರದಿ: ಜಿ. ಮಹಾಂತೇಶ್​, ಸುವರ್ಣನ್ಯೂಸ್​