ಶಿರೂರು ಶ್ರೀ: ಸಾವು, ಸತ್ಯ, ಸಂಬಂಧ ...!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 22, Jul 2018, 11:33 AM IST
Allegation  raised on  Shiruru Shri
Highlights

ಶಿರೂರು ಶ್ರೀಗಳ ಸಾವಿನ ನಂತರ ಅವರ  ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಅವರ ಬ್ರಹ್ಮಚರ್ಯ, ಮಾದ್ವ ಪರಂಪರೆ ಆಚರಣೆ ಬಗ್ಗೆ ಅಪಸ್ವರಗಳೆದ್ದಿವೆ. ಮಠದೊಳಗಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿದೆ. 

ಬೆಂಗಳೂರು (ಜು.22): ಶಿರೂರು ತೀರ್ಥರ ಸಾವು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆ ಕುರಿತು ತನಿಖೆ ನಡೆಯುತ್ತಿದೆ. ಅನೇಕರು ತಮ್ಮ ತಮ್ಮ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಅವರಿಗೆ ಎಷ್ಟು ಮಹಿಳೆಯರ ಸ್ನೇಹವಿತ್ತು, ಅವರು ಹೇಗೆ ಸ್ವಾಮಿಯಾಗುವ ಅರ್ಹತೆ ಕಳಕೊಂಡಿದ್ದರು ಅನ್ನುವುದು ಕೂಡ ಅವರಿವರ ಮಾತಲ್ಲಿ ಬಂದುಹೋಗುತ್ತಿದೆ.

ಈ ಘಟನೆಗಳನ್ನು ನೋಡುತ್ತಿದ್ದರೆ 1965 ರಲ್ಲಿ ಯು ಆರ್ ಅನಂತಮೂರ್ತಿಯವರು ಬರೆದ ಕಾದಂಬರಿ ಸಂಸ್ಕಾರ ನೆನಪಾಗುತ್ತದೆ. ಆ ಕಾದಂಬರಿಯಲ್ಲಿ ಬರುವ ನಾರಣಪ್ಪ ಎಂಬ ಅಗ್ರಹಾರದ  ಬ್ರಾಹ್ಮಣ ಸತ್ತ ನಂತರ, ಆತನಿಗೆ ಅಂತ್ಯಕ್ರಿಯೆ ಮಾಡಬೇಕೋ ಬೇಡವೋ ಎಂಬ ಪ್ರಶ್ನೆ ಎದುರಾಗುತ್ತದೆ. ಅವನು ಬ್ರಾಹ್ಮಣನಂತೆ ಬದುಕದೇ  ಇದ್ದದ್ದರಿಂದ ಆತನಿಗೆ ಸಂಸ್ಕಾರ ಮಾಡುವುದಿಲ್ಲ ಎಂದು ಅಗ್ರಹಾರದ ಮಂದಿ ಹೇಳುತ್ತಾರೆ.

ಆ ವಿಚಾರದಲ್ಲಿ ತೀರ್ಪು ಕೊಡಲು ಪ್ರಾಣೇಶಾಚಾರ್ಯ ಎಂಬ ವೇದವಿದ್ಯಾಪಾರಂಗತರಿಗೆ ವಹಿಸಲಾಗುತ್ತದೆ. ಆಗನಾರಣಪ್ಪ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ನಾರಣಪ್ಪನನ್ನು  ಬಿಟ್ಟಿಲ್ಲ ಎಂಬ ಉದ್ಗಾರವೂ ಕೇಳಿಬರುತ್ತದೆ. ಇಲ್ಲಿ ಕೂಡ ಶೀರೂರು ಮಠಾಧೀಶರಾದ ಲಕ್ಷ್ಮೀವರರು ಸ್ವಾಮಿತನವನ್ನು ಬಿಟ್ಟರೂ ಅವರನ್ನು ಸ್ವಾಮಿತನ ಬಿಟ್ಟಿಲ್ಲ ಎಂದು ಆ ಮಾತನ್ನು ಈ ಸಂದರ್ಭಕ್ಕೆ ತಂದಿಡಬಹುದೇ?

ಈ ಬಗ್ಗೆ ಕೇಳಿಬರುತ್ತಿರುವ ಎರಡು ವಾದಗಳು ಹೀಗಿವೆ;

1. ಲಕ್ಷ್ಮೀವರರು ತಮಗೆ ತೋಚಿದಂತೆ ಬದುಕಿದ್ದಾರೆ. ಅವರು ಸುಳ್ಳು ಹೇಳಿಲ್ಲ, ವಂಚನೆ ಮಾಡಿಲ್ಲ. ನಾನು ಹೀಗೇ ಇರುವುದು, ಹೀಗೆಯೇ ಇರುತ್ತೇನೆ ಎಂದಿದ್ದಾರೆ. ಅವರದು ಪ್ರಾಮಾಣಿಕ ದಾರಿ. ಅದನ್ನು ಗೌರವಿಸಿ.

2. . ಒಂದೊಂದು ಪೀಠಕ್ಕೂ ಅದರದೇ ಆದ ಗೌರವ ಇರುತ್ತದೆ. ನೀತಿನಿಯಮಗಳಿರುತ್ತವೆ. ಆ ಸ್ಥಾನದಲ್ಲಿ ಇರುವವರು ಆ ಸ್ಥಾನದ ಗೌರವ ಕಾಪಾಡಬೇಕು. ಅದು ಆಗದೇ ಹೋದರೆ ಅಲ್ಲಿಂದ ಹೊರಗೆ ಬರಬೇಕು. ಮದುವೆ ಆಗಬೇಕು ಅನ್ನಿಸಿದಾಗ ಎಷ್ಟೋ ಮಠಾಧೀಶರು, ಸನ್ಯಾಸ ತೊರೆದು ಸಂಸಾರ ಸ್ವೀಕಾರ ಮಾಡಿದ್ದಾರಲ್ಲ? ಇವರೂ ಹಾಗೆ ಮಾಡಿದರೆ ಯಾವ ತಕರಾರೂ ಇರುತ್ತಿರಲಿಲ್ಲ. ಆದರೆ ಅಲ್ಲಿದ್ದುಕೊಂಡೇ ಆ ಸ್ಥಾನದ ಮಾನಕ್ಕೆ ವ್ಯತ್ಯಯವಾಗುವಂತೆ ನಡೆದುಕೊಂಡದ್ದು ತಪ್ಪು.

ಲಕ್ಷ್ಮೀವರರು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದು ಅವರಿಗೆ ಏಳು ವರ್ಷ ಇದ್ದಾಗ. ಆ ವಯಸ್ಸಿನಲ್ಲಿ ಆ ಹುಡುಗನಿಗೆ ತಾನೇನು  ಆಗುತ್ತಿದ್ದೇನೆ ಅನ್ನುವ ಕಲ್ಪನೆಯೇ ಇರುವುದಿಲ್ಲ. ಅಷ್ಟು ಚಿಕ್ಕ ವಯಸ್ಸಿನಲ್ಲಿ ದೀಕ್ಷೆ ಕೊಡುವುದು ಸರಿಯೇ ಎಂಬ ಮೂರನೆಯ ವಾದವನ್ನೂ ಅನೇಕರು ಮಂಡಿಸುತ್ತಾರೆ. ಒಬ್ಬ ಬಾಲಕನ ಬಾಲ್ಯ ಸಹಜ ವರ್ಷಗಳನ್ನು ಧರ್ಮ ಕಸಿದುಕೊಳ್ಳುತ್ತದೆ ಎನ್ನುವವರೂ ಇದ್ದಾರೆ. ಆದರೆ ಪ್ರಾಪ್ತವಯಸ್ಕನಾದ ನಂತರ ಅದರಿಂದ ಹೊರ ಬರುವ ಅವಕಾಶವೂ ಇದ್ದೇ ಇದೆ.

ಆದರೆ ರಾಜಕಾರಣ, ಧರ್ಮ- ಇವುಗಳಲ್ಲಿ ಅಧಿಕಾರದ ಪೀಠದಿಂದ ಆಚೆ ಬರುವುದು ಸುಲಭವೇನಲ್ಲ. ಮನಸ್ಸು ಅಲ್ಲಿಗೇ ತುಡಿಯುತ್ತಿರುತ್ತದೆ. ಲಕ್ಷ್ಮೀವರರು ಬದುಕಿದ್ದಾಗ ಅವರ ಕುರಿತು ಟೀಕೆ ಇತ್ತು. ಅವರು ಅದನ್ನು ದಕ್ಕಿಸಿಕೊಂಡಿದ್ದರು. ಸಾವಿನ ನಂತರ ಆ ಟೀಕೆ ಆಕ್ಷೇಪ, ಆರೋಪಗಳಾಗಿವೆ. ಮದ್ಯ, ಮಾನಿನಿ ಮತ್ತು ಅನಾಚಾರಗಳು ಅವರ ಸಾವನ್ನು ಹಂಗಿಸುತ್ತಿವೆ.

loader