ಬೆಂಗಳೂರು (ಮಾ. 07):  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ಮಾರ್ಟ್‌ ಸಿಟಿ ಯೋಜನೆಯ ಅನುದಾನದಲ್ಲಿ 260 ಕೋಟಿ ರು. ದುರ್ಬಳಕೆಯಾಗಿದೆ ಎಂದು ಆರೋಪಿಸಿ ಬಿಜೆಪಿ ಬೆಂಗಳೂರು ನಗರ ಘಟಕ ವಕ್ತಾರ ಎನ್‌.ಆರ್‌.ರಮೇಶ್‌ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಬಿಎಂಟಿಎಫ್‌ ಮತ್ತು ಕೇಂದ್ರದ ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಿದ್ದಾರೆ.

ಬೆಂಗಳೂರು ನಗರಕ್ಕೆ ಸ್ಮಾರ್ಟ್‌ ಸಿಟಿಗಾಗಿ ಕೇಂದ್ರ ಸರ್ಕಾರವು 260 ಕೋಟಿ ರು. ಅನುದಾನ ನೀಡಿದೆ. ಆದರೆ, ಯೋಜನೆಯಲ್ಲಿ ಅಕ್ರಮ ನಡೆದಿದ್ದು, ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಶಾಸಕರಾದ ರೋಷನ್‌ ಬೇಗ್‌ ಮತ್ತು ಎನ್‌.ಎ.ಹ್ಯಾರಿಸ್‌ ಪ್ರಭಾವಕ್ಕೊಳಗಾಗಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ಅನುದಾನ ದುರುಪಯೋಗವಾಗಿರುವ ಕಾರಣ ನೀಡಲಾಗಿರುವ ಟೆಂಡರ್‌ ಅನ್ನು ರದ್ದುಗೊಳಿಸಿ ಹೊಸದಾಗಿ ಟೆಂಡರ್‌ ಕರೆಯಬೇಕು ಎಂದು ರಮೇಶ್  ಆಗ್ರಹಿಸಿದರು.

ಶಾಂತಿನಗರ ಮತ್ತು ಶಿವಾಜಿನಗರ ಕ್ಷೇತ್ರಗಳಿಗೆ ಅನುದಾನ ಬಳಕೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ.ಜಾಜ್‌ರ್‍, ಯು.ಟಿ.ಖಾದರ್‌ ಕೇಂದ್ರ ಸರ್ಕಾರದ ಅನುದಾನಗಳನ್ನು ದುರುಪಯೋಗ ಮಾಡಿಕೊಳ್ಳಲು ನೇರ ಕಾರಣರಾಗಿದ್ದಾರೆ. ಕಾಂಗ್ರೆಸ್‌ನ ಮುಖಂಡರಾದ ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ಎಸ್‌.ಟಿ.ಸೋಮಶೇಖರ್‌, ಭೈರತಿ ಬಸವರಾಜ್‌, ಮುನಿರತ್ನ, ಜಮೀರ್‌ ಅಹಮದ್‌, ಪ್ರಿಯಾಕೃಷ್ಣ ದುರ್ಬಳಕೆಯಾಗಿರುವ ಅನುದಾನದ ಫಲಾನುಭವಿಗಳಾಗಿದ್ದಾರೆ.

ಯೋಜನೆಗಾಗಿ ಬೆಂಗಳೂರು ಸ್ಮಾಟ್‌ ಸಿಟಿ ಲಿಮಿಟೆಡ್‌ ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಸಮಿತಿ ಸ್ಥಾಪಿಸಿದ್ದು, ಬಿಬಿಎಂಪಿನ ಪ್ರಮುಖ ಅಧಿಕಾರಿಗಳನ್ನು ನೇಮಿಸಲಾಯಿತು. ಈ ವೇಳೆ ಐಎಎಸ್‌ ಅಧಿಕಾರಿ ಅತಿಕ್‌ ಬೆಂಗಳೂರು ಸ್ಮಾರ್ಟ್‌ ಕ್ರಿಯಾಯೋಜನೆಯನ್ನು ತಯಾರು ಮಾಡಿದ್ದಾರೆ. ಯೋಜನೆಯ ಅನುದಾನ ಕೇವಲ ಶಾಂತಿನಗರ, ಶಿವಾಜಿನಗರ ಎರಡು ಕ್ಷೇತ್ರಗಳಿಗೆ ಹರಿದುಹೋಗುವಂತೆ ಮಾಡಲಾಗಿದೆ. ಈ ಕ್ಷೇತ್ರಗಳಿಗೆ ಸಿದ್ದರಾಮಯ್ಯ 1800 ಕೋಟಿ ರು.ಗಿಂತ ಹೆಚ್ಚು ಅನುದಾನ ನೀಡಿದ್ದರು. ಆದರೂ ಇದೇ ಕ್ಷೇತ್ರಗಳಿಗೆ ಸ್ಮಾಟ್‌ ಸಿಟಿ ಅನುದಾನ ನೀಡಲಾಗಿದೆ ಎಂದು ಆರೋಪಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆ ಮೂಲಕ ಕುಡಿಯುವ ನೀರಿನ ಸೌಲಭ್ಯ, ನೆಲದಡಿ ಕೇಬಲ್‌ಗಳ ಮೂಲಕ ವಿದ್ಯುತ್‌ ಸಂಪರ್ಕ ಕಲ್ಪಿಸುವುದು, ಒಳಚರಂಡಿ ವ್ಯವಸ್ಥೆ, ಘನತ್ಯಾಜ್ಯ ನಿರ್ವಹಣೆ, ನಗರ ಸಾರಿಗೆ ವ್ಯವಸ್ಥೆ, ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಸೌಕರ್ಯ, ಉತ್ತಮ ಪರಿಸರ ನಿರ್ಮಾಣ, ಸೇರಿದಂತೆ ಇತರೆ ಉತ್ತಮ ಯೋಜನೆಗಳನ್ನು ಒದಗಿಸಲು ಕ್ರಿಯಾ ಯೋಜನೆ ರೂಪಿಸಬೇಕು. ಕೇಂದ್ರ ಸರ್ಕಾರವು ಸ್ಮಾರ್ಟ್‌ ಸಿಟಿ ಯೋಜನೆಗೆ ನಗರಗಳನ್ನು ಆಯ್ಕೆ ಮಾಡುವಾಗ 10 ನಿಯಮಾವಳಿಗಳನ್ನು ತಿಳಿಸಲಾಗಿದೆ. ಆದರೆ, ಇದರಲ್ಲಿ 9 ನಿಯಮಾವಳಿಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ರಮೇಶ್‌ ಕಿಡಿಕಾರಿದರು.

ಅನುದಾನ ದುರುಪಯೋಗ ಕುರಿತು ತನಿಖೆ ನಡೆಸುವಂತೆ ಎಸಿಬಿ, ಬಿಎಂಟಿಎಫ್‌ ಮತ್ತು ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಲಾಗಿದೆ. ಕರೆದಿರುವ ಟೆಂಡರ್‌ ರದ್ದುಗೊಳಿಸಿ ಹೊಸದಾಗಿ ಟೆಂಡರ್‌ ಕರೆಯುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಗೆ ಕೋರಲಾಗಿದೆ. ಅನುದಾನ ದುರ್ಬಳಕೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಬೇಕು ಎಂದು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ ಎಂದರು.