ಒಂದು ವೇಳೆ ಶಾಸಕರ ಕ್ಷೇತ್ರದಲ್ಲಿ ಶಾಸಕರ ವಿರೋಧಿ ಅಲೆ ಮೂಡಿ ಅವರು ಗೆಲ್ಲಲು ಅರ್ಹರಲ್ಲ ಎಂದು ಕೇಂದ್ರ ಚುನಾವಣೆ ಸಮಿತಿ ಭಾವಿಸಿದರೆ ಮಾತ್ರ ಅಂತಹ ಶಾಸಕರಿಗೆ ಟಿಕೆಟ್‌ ತಪ್ಪಲಿದೆ. ಇಲ್ಲದಿದ್ದರೆ ಹಾಲಿ ಗೆದ್ದಿರುವ ಎಲ್ಲಾ ಶಾಸಕರಿಗೂ ಟಿಕೆಟ್‌ ನೀಡಬೇಕು ಎಂದು ಭಾವಿಸಿದ್ದೇವೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ಮುಂದಿನ ಚುನಾವಣೆಗೆ ಟಿಕೆಟ್‌ ನೀಡಲು ಗೆಲ್ಲುವುದೇ ಮಾನದಂಡವಾಗಿದ್ದು, ಪ್ರಸ್ತುತ ಕಾಂಗ್ರೆಸ್ಸಿನ ಎಲ್ಲ ಶಾಸಕರಿಗೂ ಟಿಕೆಟ್‌ ನೀಡಲಾಗುವುದು. ಜತೆಗೆ ಜೆಡಿಎಸ್‌ನಿಂದ ಪಕ್ಷಕ್ಕೆ ಸೇರಿಸಿಕೊಳ್ಳುವ ಶಾಸಕರಿಗೂ ಟಿಕೆಟ್‌ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಒಂದು ವೇಳೆ ಶಾಸಕರ ಕ್ಷೇತ್ರದಲ್ಲಿ ಶಾಸಕರ ವಿರೋಧಿ ಅಲೆ ಮೂಡಿ ಅವರು ಗೆಲ್ಲಲು ಅರ್ಹರಲ್ಲ ಎಂದು ಕೇಂದ್ರ ಚುನಾವಣೆ ಸಮಿತಿ ಭಾವಿಸಿದರೆ ಮಾತ್ರ ಅಂತಹ ಶಾಸಕರಿಗೆ ಟಿಕೆಟ್‌ ತಪ್ಪಲಿದೆ. ಇಲ್ಲದಿದ್ದರೆ ಹಾಲಿ ಗೆದ್ದಿರುವ ಎಲ್ಲಾ ಶಾಸಕರಿಗೂ ಟಿಕೆಟ್‌ ನೀಡಬೇಕು ಎಂದು ಭಾವಿಸಿದ್ದೇವೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಮುಂದುವರೆದಿರುವ ಜಿ. ಪರಮೇಶ್ವರ್‌ ಭಾನುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

ಜೆಡಿಎಸ್‌ನಿಂದ ಹಲವರು ಕಾಂಗ್ರೆಸ್‌ ಸೇರಲು ಉತ್ಸುಕರಾಗಿದ್ದು, ಅವರಿಗೆ ಕಾಂಗ್ರೆಸ್‌ ಪಕ್ಷಕ್ಕೆ ಬರುವಷ್ಟುಶಕ್ತಿ ಇದೆ. ಹೀಗಾಗಿ ಅಂತಹ ಶಾಸಕರನ್ನು ಸೇರಿಸಿಕೊಂಡು ಸ್ಪರ್ಧೆ ಮಾಡಲು ಟಿಕೆಟ್‌ ಸಹ ನೀಡುತ್ತೇವೆ. ಆದರೆ ಬರುತ್ತಿರುವವರು ಎಷ್ಟುಮಂದಿ ಹಾಗೂ ಯಾರು ಎಂಬುದನ್ನು ಸದ್ಯಕ್ಕೆ ಹೇಳುವುದಿಲ್ಲ. 2018ರ ಚುನಾವಣೆಯಲ್ಲಿ ಗೆಲ್ಲಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಟಿಕೆಟ್‌ ಆಯ್ಕೆ ಪ್ರಕ್ರಿಯೆಯಲ್ಲಿ ಗೆಲ್ಲುವುದೇ ಮಾನದಂಡವಾಗಿಸಿ ಕೊಂಡು ಹಾಲಿ ಶಾಸಕರಿಗೆ ಟಿಕೆಟ್‌ ನೀಡಲು ನಿರ್ಧಸಿದ್ದೇವೆ. 124 ಮಂದಿಗೂ ಟಿಕೆಟ್‌ ನೀಡಲು ಶಿಫಾರಸು ಮಾಡುತ್ತೇವೆ. ಆದರೆ ಅಂತಿಮ ಆಯ್ಕೆ ಕೇಂದ್ರ ಚುನಾವಣಾ ಸಮಿತಿಗೆ ಬಿಟ್ಟದ್ದು. 2013ರ ಚುನಾವಣೆಯಲ್ಲೂ ಸಹ 2008ರಲ್ಲಿ ಗೆದ್ದಿದ್ದ 65 ಮಂದಿಗೂ ಟಿಕೆಟ್‌ ನೀಡಲು ಶಿಫಾರಸು ಮಾಡಲಾಗಿತ್ತು. ಅದರಲ್ಲಿ 64 ಮಂದಿಗೆ ಟಿಕೆಟ್‌ ನೀಡಿದ್ದಾರೆ ಎಂದು ಹೇಳಿದರು.

ಸಿಎಲ್‌ಪಿ ಸೂಚಿಸಿದರೆ ಮುಂದೆಯೂ ಸಿದ್ದು ಸಿಎಂ: ಪ್ರತಿ ಬಾರಿಯೂ ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ವಾಡಿಕೆ ಮಾತಿತ್ತು. ಕಳೆದ ಬಾರಿ ನನಗೂ ಈ ಅಭಿಪ್ರಾಯ ಮೂಡಿತ್ತಾದರೂ ಜನರು ನನ್ನನ್ನು ತಿರಸ್ಕರಿಸಿದರು. ಇದರ ಬೆನ್ನಲ್ಲಿ ಬಂದ ದಲಿತ ಮುಖ್ಯಮಂತ್ರಿ ಕೂಗು ನಾನು ಮುಖ್ಯಮಂತ್ರಿ ಆಗಬೇಕು ಎಂಬ ಉದ್ದೇಶದಿಂದ ಹೇಳಿದ್ದಲ್ಲ. ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದು, ನನಗೆ ಅಧ್ಯಕ್ಷಗಿರಿ ಕೊಟ್ಟಿದ್ದಾರೆ. ಚುನಾವಣೆ ಗೆದ್ದ ಬಳಿಕ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಯಾರನ್ನು ಸೂಚಿಸುತ್ತದೆಯೋ ಅವರೇ ಮುಖ್ಯಮಂತ್ರಿ ಆಗುತ್ತಾರೆ. ಒಂದು ವೇಳೆ ಶಾಸಕಾಂಗ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಸೂಚಿಸಿದರೆ ಅವರನ್ನೇ ಹೈಕಮಾಂಡ್‌ ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆ ಎಂದರು.

ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ನಾನು ಕೆಪಿಸಿಸಿ ಅಧ್ಯಕ್ಷನಾಗಿ ಕೆಲವು ನಿಯಮದ ಅಡಿ ಕೆಲಸ ಮಾಡಬೇಕು. ಹೀಗಾಗಿ ಕೆಲವು ಅಭಿವ್ಯಕ್ತಿಗಳಿಗೆ ನನಗೆ ಸ್ವಾತಂತ್ರ್ಯವಿಲ್ಲ ಎಂದು ಪ್ರಶ್ನೆಯನ್ನು ತೇಲಿಸಿದರು.
ವಿಶ್ವಾನಾಥ್‌ ಮನವೊಲಿಸಿದ್ದೇವೆ: ಪಕ್ಷದಲ್ಲಿನ ಹಿರಿಯರ ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಸ್‌.ಎಂ. ಕೃಷ್ಣ ಅವರ ಮಾದರಿಯಲ್ಲಿ ಯಾರೊಬ್ಬರೂ ಪಕ್ಷ ಬಿಡಬೇಡಿ ಎಂದು ಮನವಿ ಮಾಡಿದ್ದೇನೆ. ಎಚ್‌.ವಿಶ್ವನಾಥ್‌ ಅವರ ಜತೆ ಖುದ್ದಾಗಿ ಮಾತನಾಡಿದ್ದು, ಪಕ್ಷ ತೊರೆಯುವ ಮನಸ್ಸು ಮಾಡಬೇಡಿ ಎಂದು ಮನವಿ ಮಾಡಿದ್ದೇನೆ. ಅವರು ಒಪ್ಪಿಕೊಂಡಂತಿದೆ. ಹೀಗಾಗಿಯೇ ಎಲ್ಲೂ ಹೇಳಿಕೆ ನೀಡುತ್ತಿಲ್ಲ ಎಂದರು.

2018ರ ಏಪ್ರಿಲ್‌- ಮೇನಲ್ಲಿ ಚುನಾವಣೆ:

2018ಕ್ಕೆ ಮೊದಲೇ ಚುನಾವಣೆ ಬರುತ್ತದೆ ಎಂಬ ಯಡಿಯೂರಪ್ಪ ಮಾತು ಸುಳ್ಳು. ಒಂದು ವೇಳೆ ಅವಧಿಪೂರ್ವ ಚುನಾವಣೆ ಮಾಡುವುದಾದರೆ ಸರ್ಕಾರದ ಅಭಿಪ್ರಾಯವನ್ನು ಆಯೋಗ ಕೇಳ ಬೇಕಾಗುತ್ತದೆ. ನನ್ನ ಪ್ರಕಾರ 2018ರ ಏಪ್ರಿಲ್‌, ಮೇ ತಿಂಗಳಲ್ಲಿ ಚುನಾವಣೆ ನಡೆವ ಸಾಧ್ಯತೆ ಇದೆ ಎಂದು ಪರಮೇಶ್ವರ್‌ ಹೇಳಿದರು.

ಹೈಕಮಾಂಡ್ ಹೇಳಿದ ಕಡೆ ಸ್ಪರ್ಧೆ:

2018ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ. ಮಧುಗಿರಿ, ಕೊರಟಗೆರೆ ನನ್ನ ಕರ್ಮಭೂಮಿ. ಕಳೆದ ಬಾರಿ 54 ಸಾವಿರ ಮತ ಗಳನ್ನು ನೀಡಿದ್ದಾರೆ. ಹೀಗಾಗಿ ಅಲ್ಲೇ ಸ್ಪರ್ಧೆ ಮಾಡಲು ಪ್ರಯತ್ನಿಸುತ್ತೇನೆ. ಆದರೆ ಅಂತಿಮ ತೀರ್ಮಾನ ಹೈಕಮಾಂಡ್‌ಗೆ ಸೇರಿದ್ದು. ಅವರು ಹೇಳಿದ ಕಡೆ ಸ್ಪರ್ಧಿಸುತ್ತೇನೆ ಎಂದು ಪರಮೇಶ್ವರ್‌ ತಿಳಿಸಿದರು.