ನವದೆಹಲಿ(ಫೆ.16): ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಇಂದು ನವದೆಹಲಿಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.

ಪುಲ್ವಾಮಾ ದಾಳಿಯ ಕುರಿತು ಸರ್ವಪಕ್ಷಗಳ ಸಭೆಯಲ್ಲಿ ಮಾಹಿತಿ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್, ಭಯೋತ್ಪಾದಕರ ಅಟ್ಟಹಾಸವನ್ನು ಖಂಡಿಸಿದರು. ನಂತರ ಮಾತನಾಡಿದ ಸರ್ವಪಕ್ಷಗಳ ಸದಸ್ಯರು, ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಕೇಂದ್ರ ಸರ್ಕಾರದೊಂದಿಗೆ ನಿಲ್ಲುವ ಒಕ್ಕೊರಲಿನ ಅಭಿಪ್ರಾಯ ಮಂಡಿಸಿದರು.

ಸರ್ವಪಕ್ಷ ಸಭೆ ಮುಗಿದ ನಂತರ ಮಾಹಿತಿ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್, ಈ ದುರ್ಘಟನೆಗೆ ಕಾರಣರು ಯಾರೇ ಆಗಿರಲಿ, ಅವರನ್ನು ಪತ್ತೆಹಚ್ಚಿ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಲು ಎಲ್ಲ ಪಕ್ಷದವರು ಒಮ್ಮತದಿಂದ ನಿರ್ಧಾರ ಮಾಡಿದ್ದೇವೆ. ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಉಗ್ರಗಾಮಿ ಚಟುವಟಿಕೆಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಮತ್ತು ಒಪ್ಪುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಗುಲಾಂ ನಬಿ ಆಜಾದ್, ಆನಂದ್ ಶರ್ಮ, ಜ್ಯೋತಿರಾಧಿತ್ಯ ಸಿಂಧ್ಯ, ಸುದೀಪ್ ಬಂಡೋಪಾಧ್ಯಾಯ, ಟಿಎಂಸಿಯ ದೆರೆಕ್ ಒ ಬ್ರೈನ್, ಶಿವಸೇನೆಯ ಸಂಜಯ್ ರಾವತ್, ಟಿಆರ್‌ಎಸ್‌ನ ಜಿತೇಂದ್ರ ರೆಡ್ಡಿ, ಸಿಪಿಐನ ಡಿ ರಾಜಾ, ನ್ಯಾಷನಲ್ ಕಾನ್ಫರೆನ್ಸ್ ನ ಫಾರೂಕ್ ಅಬ್ದುಲ್ಲಾ, ಎಲ್‌ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಇತರರು ಭಾಗವಹಿಸಿದ್ದರು.