ಮುಂಬೈ: ಸ್ವಾತಂತ್ರ್ಯಾ ನಂತರ ಹಲವು ದಶಕಗಳ ಕಾಲ ವಿದ್ಯುತ್‌ನ ಮುಖವನ್ನೇ ನೋಡಿರದ ಹಲವು ಗ್ರಾಮಗಳನ್ನು ಹೊಂದಿದ್ದ ಕುಖ್ಯಾತಿ ಹೊಂದಿದ್ದ ಭಾರತ, ಇದೀಗ ಹೊಸದೊಂದು ಸಾಧನೆ ಮಾಡಿದೆ. ದೇಶದ ಎಲ್ಲಾ 5,97,464 ಗ್ರಾಮಗಳೂ ಇದೀಗ ವಿದ್ಯುತ್‌ ಪೂರೈಕೆ ಜಾಲಕ್ಕೆ ಸೇರ್ಪಡೆಗೊಂಡಿದ್ದು, ಇಂಥದ್ದೊಂದು ಸಾಧನೆಯನ್ನು ಕೇಂದ್ರ ಸರ್ಕಾರ ಅವಧಿಗೂ ಮುನ್ನವೇ ಮಾಡಿದೆ.

2014ರಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 18454 ಗ್ರಾಮಗಳಿಗೆ ಇನ್ನೂ ವಿದ್ಯುತ್‌ ಸಂಪರ್ಕ ಇರಲಿಲ್ಲ. 2015ರ ಆ.15ರಂದು ಸ್ವಾತಂತೋತ್ಸವ ಭಾಷಣದ ವೇಳೆ ಮುಂದಿನ 1000 ದಿನಗಳಲ್ಲಿ ದೇಶದ ಎಲ್ಲಾ ಗ್ರಾಮಗಳಿಗೂ ವಿದ್ಯುತ್‌ ಪೂರೈಕೆ ಮಾಡುವುದಾಗಿ ಘೋಷಿಸಿದ್ದರು. ಈ ಅವಧಿ 2017ರ ಮೇ ತಿಂಗಳಿಗೆ ಮುಗಿಯುತ್ತಿದ್ದು, ಅದಕ್ಕೂ 12 ದಿನ ಮೊದಲೇ ದೇಶದ ಎಲ್ಲಾ ಗ್ರಾಮಗಳೂ ವಿದ್ಯುತ್‌ ಪೂರೈಕೆ ಜಾಲಕ್ಕೆ ಸೇರಿವೆ. ಈಶಾನ್ಯ ರಾಜ್ಯದ ಕುಗ್ರಾಮವೊಂದಕ್ಕೆ ಶನಿವಾರ ಸಂಜೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಮೂಲಕ ದೇಶದ ಕೊನೆಯ ವಿದ್ಯುತ್‌ ಸಂಪರ್ಕಿತ ಗ್ರಾಮವಾಗಿ ಗುರುತಿಸಲ್ಪಟ್ಟಿದೆ. ಇದು ಭಾರತದ ಅಭಿವೃದ್ಧಿಯ ಹಾದಿಯಲ್ಲಿ ಐತಿಹಾಸಿಕ ದಿನವಾಗಿ ಗುರುತಿಸಲ್ಪಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಾನದಂಡ ಏನು?: ಎಲ್ಲ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕವಾಗಿದೆ ಎಂದಾಕ್ಷಣ ಎಲ್ಲ ಭಾರತೀಯರಿಗೆ ವಿದ್ಯುತ್‌ ದೊರಕಿದೆ ಎಂದರ್ಥವಲ್ಲ. ಗ್ರಾಮದ ಶೇ.10 ಮನೆಗಳು, ಶಾಲೆ, ಆಸ್ಪತ್ರೆ, ಸ್ಥಳೀಯ ಆಡಳಿತ ಸೇರಿದಂತೆ ಸಾರ್ವಜನಿಕ ಆಡಳಿತ ಕಚೇರಿಗಳಿಗೆ ವಿದ್ಯುತ್‌ ಸಂಪರ್ಕ ಆಗಿದ್ದರೆ, ಆ ಗ್ರಾಮ ವಿದ್ಯುತ್‌ ಸಂಪರ್ಕಿತ ಗ್ರಾಮ ಎಂದು ಪರಿಗಣಿಸಲಾಗುತ್ತದೆ.

ಆದರೆ, ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು, ಎಲ್ಲ ಗ್ರಾಮಗಳಿಗೂ ವಿದ್ಯುತ್‌ ಸಂಪರ್ಕವಾಗಿಲ್ಲ ಎಂದು ಪ್ರತಿಪಾದಿಸಿದ್ದಾರೆ. ತಮ್ಮ ಸ್ವಗ್ರಾಮಕ್ಕೆ ಇನ್ನೂ ವಿದ್ಯುತ್‌ ಬಂದಿಲ್ಲ ಎಂದು ದಿಲೀಪ್‌ ಗುಪ್ತಾ ಎಂಬವರು ಟ್ವೀಟ್‌ ಮಾಡಿದ್ದಾರೆ.