ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಬದಲು ಮದ್ಯ ಬೆರೆಸಿದ ನೀರು ಕುಡಿಸಿದ ಮೂರು ಮಂದಿ ಶಿಕ್ಷಕರನ್ನು ಮಧುಗಿರಿ ಡಿಡಿಪಿಐ ಶಿವಶಂಕರರೆಡ್ಡಿ ಅಮಾನತು ಮಾಡಿದ್ದಾರೆ.

ಕೊರಟಗೆರೆ (ಡಿ.14): ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಬದಲು ಮದ್ಯ ಬೆರೆಸಿದ ನೀರು ಕುಡಿಸಿದ ಮೂರು ಮಂದಿ ಶಿಕ್ಷಕರನ್ನು ಮಧುಗಿರಿ ಡಿಡಿಪಿಐ ಶಿವಶಂಕರರೆಡ್ಡಿ ಅಮಾನತು ಮಾಡಿದ್ದಾರೆ. ತಾಲೂಕಿನ ಹೊಳವನಹಳ್ಳಿಯ ಬೊಮ್ಮಲ ದೇವಿಪುರ ಗ್ರಾಮ ಪಂಚಾಯತ್ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಚ್ಚಿದಾನಂದ ಮೂರ್ತಿ, ಸಹ ಶಿಕ್ಷಕರಾದ ಷೇಕ್ ಮುಜಾಮೀಲ್, ಧನಸಿಂಗ್ ರಾಥೋಡ್ ಅಮಾನತುಗೊಂಡವರು.

ಡಿ.6 ರ ರಾತ್ರಿ 9ಗಂಟೆ ಬೊಮ್ಮಲದೇವಿಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 8, 9 ಮತ್ತು 10ನೇ ತರಗತಿಯ ಒಟ್ಟು 63 ವಿದ್ಯಾರ್ಥಿಗಳೊಂದಿಗೆ 6 ಮಂದಿ ಶಿಕ್ಷಕರು, ಇಬ್ಬರು ಡಿಗ್ರೂಪ್ ನೌಕರರು ಮತ್ತು ಇಬ್ಬರು ಅಡುಗೆ ಸಿಬ್ಬಂದಿ 3 ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದರು. ಜೋಗ್ ಫಾಲ್ಸ್, ಮುರುಡೇಶ್ವರ, ಕೊಲ್ಲೂರು, ಉಡುಪಿ, ಕಟೀಲು ಮೂಲಕ ಧರ್ಮಸ್ಥಳ ಭೇಟಿ ನೀಡಿ ವಾಪಸಾಗಿದ್ದರು.

ಬೇಲೂರು ಮಾರ್ಗವಾಗಿ ವಾಪಸಾಗುವಾಗ ಮಾರ್ಗ ಮಧ್ಯೆ ರಾತ್ರಿ 9ಕ್ಕೆ ಜಾವಗಲ್ ಸಮೀಪ ಊಟಕ್ಕಾಗಿ ವಾಹನ ನಿಲ್ಲಿಸಲಾಗಿತ್ತು. ಈ ವೇಳೆ ಸಿಬ್ಬಂದಿ ಊಟ ತಯಾರಿಸುತ್ತಿದ್ದಾಗ ಕೆಲ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡುತ್ತಿದ್ದರು. ಕುಣಿದು ದಣಿದಿದ್ದ ಕೆಲ ವಿದ್ಯಾರ್ಥಿಗಳು ಶಿಕ್ಷಕರನ್ನು ನೀರು ಕೇಳಿದ್ದರು. ಆಗ ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರು ಕುಡಿಯುವ ನೀರಿಗೆ ಮದ್ಯ ಬೆರೆಸಿ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

ಈ ನೀರು ಕುಡಿದ 18ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಟ್ಟೆನೋವು, ಹೊಟ್ಟೆ ಉರಿ, ವಾಂತಿ ಮಾಡಿಕೊಂಡಿದ್ದರು. ಮನೆಗೆ ಬಂದ ಬಳಿಕ ಇವರಿಗೆ ಪೋಷಕರು ಭಾನುವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಮಕ್ಕಳು ಅಸ್ವಸ್ಥ ಗೊಂಡ ವಿಚಾರ ಎರಡು ದಿನಗಳಿಂದ ಗ್ರಾಮಸ್ಥರು ಹಾಗೂ ಎಸ್ಡಿಎಂಸಿ ಮಧ್ಯೆ ಚರ್ಚೆಗೆ ಕಾರಣವಾಗಿತ್ತು. ನಂತರ ಕೂಲಂಕಷವಾಗಿ ಮಾಹಿತಿ ಕಲೆಹಾಕಿದಾಗ ನೀರಿನ ಬದಲು ಮದ್ಯ ಕುಡಿಸಿದ ಪ್ರಕರಣ ಬೆಳಕಿಗೆ ಬಂದಿದೆ.