Asianet Suvarna News Asianet Suvarna News

ಅಕ್ರಮ-ಸಕ್ರಮ ಯೋಜನೆಗೆ ಅಧಿಸೂಚನೆ ಶೀಘ್ರ ಪ್ರಕಟ?

ಅಕ್ರಮ-ಸಕ್ರಮ ಕುರಿತು ಈಗಾಗಲೇ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಆಧರಿಸಿ, ನಿಯಮಗಳನ್ನು ರಚಿಸಿ, ಅಧಿಸೂಚನೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

akrama sakrama notification likely soon

ಬೆಂಗಳೂರು: ರಾಜ್ಯದ ಗ್ರಾಮೀಣ, ನಗರ ಪ್ರದೇಶದಲ್ಲಿ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡ ಬಡ ಜನರಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ರೂಪಿಸಿರುವ ಅಕ್ರಮ-ಸಕ್ರಮ ಯೋಜನೆ ಕುರಿತು ಶೀಘ್ರ ಅಧಿಸೂಚನೆ ಹೊರ ಬೀಳುವ ಸಾಧ್ಯತೆ ಇದೆ.
ಶನಿವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ನಗರಾಭಿವೃದ್ಧಿ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಕ್ರಮ-ಸಕ್ರಮ ಯೋಜನೆ ಅನುಷ್ಠಾನ ಕುರಿತಂತೆ ಪರಿಶೀಲನೆ ನಡೆಸಿದರು.

ಅಕ್ರಮ-ಸಕ್ರಮ ಯೋಜನೆಗೆ ಹೈಕೋರ್ಟ್‌ ಇತ್ತೀಚೆಗಷ್ಟೇ ಹಸಿರು ನಿಶಾನೆ ತೋರಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಡಿ ಅರ್ಜಿ ಸಲ್ಲಿಸಿದವರು ಹೈಕೋರ್ಟ್‌ ಆದೇಶ ಪ್ರಶ್ನಿಸಿ, ಸುಪ್ರೀಂಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಸಿಎಂ ಗಮನಕ್ಕೆ ತಂದರು. ಅಕ್ರಮ-ಸಕ್ರಮ ಕುರಿತು ಈಗಾಗಲೇ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಆಧರಿಸಿ, ನಿಯಮಗಳನ್ನು ರಚಿಸಿ, ಅಧಿಸೂಚನೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 94-ಸಿ ಮತ್ತು 94-ಸಿಸಿ ಅನ್ವಯ ರೂಪಿಸಲಾಗಿದ್ದ ಸಾಂಕೇತಿಕ ಬೆಲೆಗಳನ್ನು ತಗ್ಗಿಸಲು ಸಂಪುಟ ನಿರ್ಧರಿಸಿತ್ತು. ಗ್ರಾಮೀಣ ಪ್ರದೇಶದಲ್ಲಿ 30-40 ಚದರ ಅಡಿಗೆ ರೂ.1000, 40-60 ಚದರ ಅಡಿಗೆ ರೂ.2000 ಹಾಗೂ 50-80 ಚದರ ಅಡಿಯ ನಿವೇಶನಗಳಿಗೆ ರೂ.3000 ಗಳಿಗೆ ಪರಿಷ್ಕರಿಸಲು ಇತ್ತೀಚೆಗಷ್ಟೇ ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಈ ಮೊದಲು ಕ್ರಮವಾಗಿ ರೂ.2, ರೂ.4 ಹಾಗೂ ರೂ.8000 ವಿಧಿಸಲಾಗುತ್ತಿತ್ತು. ನಗರ ಪ್ರದೇಶಗಳಲ್ಲಿ (ಬಿಬಿಎಂಪಿ ಹೊರತುಪಡಿಸಿ) 20-30 ಚದರ ಅಡಿಗೆ ರೂ.5 ಸಾವಿರಗಳಿಗೆ ಪರಿಷ್ಕರಿಸಿದ್ದು, ಪರಿಶಿಷ್ಟರು ಹಾಗೂ ವಿಕಲಚೇತರಿಗೆ ರೂ.2 ಸಾವಿರಗಳಿಗೆ ಇಳಿಸಲಾಗಿದೆ. ಈ ಮೊದಲು ರೂ.10 ಸಾವಿರ ನಿಗದಿಪಡಿಸಲಾಗಿತ್ತು.

ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ರೋಶನ್‌ ಬೇಗ್‌, ಈಶ್ವರ್‌ ಖಂಡ್ರೆ, ಮೇಯರ್‌ ಪದ್ಮಾವತಿ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios