Asianet Suvarna News Asianet Suvarna News

ದೇವೇಗೌಡ, ಮುಲಾಯಂ, ಲಾಲೂ ಸಮ್ಮುಖದಲ್ಲೇ ಪರಸ್ಪರ ಠೇಂಕರಿಸಿದ ಅಖಿಲೇಶ್-ಶಿವಪಾಲ್

ಖಡ್ಗ ಹಿಡಿದುಕೊಂಡೇ ವೇದಿಕೆ ಹತ್ತಿದ್ದ ಅಖಿಲೇಶ್, ‘‘ನೀವು ನನಗೆ ಖಡ್ಗ ಕೊಟ್ಟಿದ್ದೀರಿ. ಆದರೆ, ಅದನ್ನು ಬಳಸಲು ಬಿಡುತ್ತಿಲ್ಲ,’’ ಎಂದು ಶಿವಪಾಲ್‌ಗೆ ಟಾಂಗ್ ನೀಡಿದರು.

akhilesh and shivpal yadav show dissidence in public

ಲಖನೌ/ಸಹರಾನ್ಪುರ: ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್ ಅವರ ವಿಕಾಸ ಯಾತ್ರೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದ ಸಮಾಜವಾದಿ ಪಕ್ಷ ಎರಡೇ ದಿನದಲ್ಲಿ ಮತ್ತೆ ಬಿಕ್ಕಟ್ಟನ್ನು ತೋರ್ಪಡಿಸಿದೆ. ಪಕ್ಷದ ರಜತಮಹೋತ್ಸವ ಕಾರ್ಯಕ್ರಮದಲ್ಲಿ ವೇದಿಕೆಯಲ್ಲೇ ಅಖಿಲೇಶ್ ಹಾಗೂ ಶಿವಪಾಲ್ ಯಾದವ್ ಪರಸ್ಪರ ಜಗಳವಾಡಿಕೊಂಡಿದ್ದಾರೆ. ಜತೆಗೆ, ಭಾಷಣ ಮಾಡುತ್ತಿದ್ದ ಅಖಿಲೇಶ್ ಪರ ನಾಯಕ ಜಾವೇದಿ ಆಬಿದಿ ಅವರನ್ನು ವೇದಿಕೆಯಲ್ಲೇ ಶಿವಪಾಲ್ ಅವರು ತಳ್ಳಿದ ಘಟನೆಯೂ ನಡೆದಿದೆ.

ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಜನತಾ ಪರಿವಾರದ ಕೆಲವು ನಾಯಕರ ಸಮ್ಮುಖದಲ್ಲೇ ಅಖಿಲೇಶ್-ಶಿವಪಾಲ್ ವೈಮನಸ್ಸು ಸ್ಫೋಟಗೊಂಡಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಪಾಲ್, ‘‘ಕೆಲವರು ಹಣೆಬರಹದಿಂದ, ಇನ್ನು ಕೆಲವರು ಪಿತ್ರಾರ್ಜಿತದಿಂದಾಗಿ ಮೇಲಕ್ಕೇರುತ್ತಾರೆ. ಮತ್ತೆ ಕೆಲವರಿಗೆ ಜೀವನವಿಡೀ ಪರಿಶ್ರಮ ಪಟ್ಟರೂ, ಏನೂ ಸಿಗುವುದಿಲ್ಲ. ನಾನು ಜನಪ್ರಿಯ ಸಿಎಂ ಅಖಿಲೇಶ್‌ಗೆ ಹೇಳುವುದಿಷ್ಟೆ- ನಿಮಗೆ ಯಾವ ತ್ಯಾಗ ಬೇಕಿದ್ದರೂ ನಾನು ಮಾಡಬಲ್ಲೆ. ನನಗೆ ಸಿಎಂ ಆಗುವ ಕನಸಿಲ್ಲ. ನೀವು ನನ್ನನ್ನು ಅವಮಾನಿಸಿ, ಎಷ್ಟು ಬಾರಿ ಬೇಕಿದ್ದರೂ ವಜಾ ಮಾಡಿ, ಪಕ್ಷಕ್ಕಾಗಿ ನನ್ನ ರಕ್ತ ಕೊಡಲೂ ಸಿದ್ಧ,’’ ಎಂದರು. ಇದಾದ ಬಳಿಕ ವೇದಿಕೆಯಲ್ಲಿದ್ದ ನಾಯಕರಿಗೆ ಖಡ್ಗವನ್ನು ವಿತರಿಸಲಾಯಿತು.

ಖಡ್ಗ ಹಿಡಿದುಕೊಂಡೇ ವೇದಿಕೆ ಹತ್ತಿದ್ದ ಅಖಿಲೇಶ್, ‘‘ನೀವು ನನಗೆ ಖಡ್ಗ ಕೊಟ್ಟಿದ್ದೀರಿ. ಆದರೆ, ಅದನ್ನು ಬಳಸಲು ಬಿಡುತ್ತಿಲ್ಲ,’’ ಎಂದು ಶಿವಪಾಲ್‌ಗೆ ಟಾಂಗ್ ನೀಡಿದರು. ಜತೆಗೆ, ‘‘ಸತ್ತ ಬಳಿಕವೇ ನನ್ನ ಬಗ್ಗೆ ಜನ ಕೇಳುವಂತಾಗಬೇಕು ಎಂದು ರಾಮ್‌ಮನೋಹರ್ ಲೋಹಿಯಾ ಹೇಳಿದ್ದರು. ಎಲ್ಲವೂ ಹಾಳಾದ ಬಳಿಕವೇ ಜನರು ಕೇಳುತ್ತಾರೆ,’’ ಎಂದೂ ಹೇಳಿದರು.

ಎಸ್ಪಿ ರಜತ ಮಹೋತ್ಸವದಲ್ಲಿ ಮಾಜಿ ಪ್ರಧಾನಿ ದೇವೇಗೌಡ
ಕೋಮುವಾದಿ ಶಕ್ತಿಗಳ ವಿರುದ್ಧ ಜನತಾ ಪರಿವಾರದ ನಾಯಕರೆಲ್ಲ ಒಂದಾಗಬೇಕು ಎಂದು ಮಾಜಿ ಪ್ರಧಾನಿ ಎಚ್'ಡಿ ದೇವೇಗೌಡ ಇದೇ ವೇಳೆ ಕರೆ ನೀಡಿದ್ದಾರೆ. ಲಖನೌನಲ್ಲಿ ಶನಿವಾರ ಸಮಾಜವಾದಿ ಪಕ್ಷದ ರಜತಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘‘ಸಮಾಜವಾದಿ ಪಕ್ಷವು ಕೋಮುವಾದಿ ಶಕ್ತಿಗಳನ್ನು ಎದುರಿಸಬಲ್ಲಂತಹ ಪ್ರಮುಖ ಪಕ್ಷವಾಗಿದೆ. ಹಿರಿಯ ನಾಯಕರಾದ ಮುಲಾಯಂ ಸಿಂಗ್ ಯಾದವ್, ಲಾಲು ಪ್ರಸಾದ್ ಯಾದವ್, ಶರದ್ ಯಾದವ್‌ನಂಥವರು ಒಗ್ಗಟ್ಟಾಗಿ, ದೇಶದಲ್ಲಿನ ಕೋಮುಶಕ್ತಿಗಳ ವಿರುದ್ಧ ಹೋರಾಡಬೇಕು,’’ ಎಂದು ಹೇಳಿದ್ದಾರೆ.

ಎಸ್ಪಿಯಲ್ಲಿನ ಆಂತರಿಕ ಭಿನ್ನಮತದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ‘‘ಎಸ್ಪಿಯೊಳಗೇ ಬಿಕ್ಕಟ್ಟು ಮೂಡಿರುವುದು ಗಮನಕ್ಕೆ ಬಂದಿದೆ. ನೀವು ಒಗ್ಗಟ್ಟಾಗಿರಬೇಕು ಎಂದು ನಾನು ಬಯಸುತ್ತೇನೆ. ಮುಲಾಯಂ ಅವರ ನಾಯಕತ್ವದಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಬೇಕು. ಉತ್ತರಪ್ರದೇಶದಲ್ಲಿ ಎಸ್ಪಿ ಗೆದ್ದೇ ಗೆಲ್ಲುತ್ತದೆ. ಇದೇ ರಾಜ್ಯವು ಭಾರತದ ಭವಿಷ್ಯದ ಅಜೆಂಡಾವನ್ನು ರೂಪಿಸಲಿದೆ,’’ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಬಿಹಾರ ಚುನಾವಣೆ ವೇಳೆ ಜನತಾ ಪರಿವಾರದ 6 ಪ್ರಮುಖ ನಾಯಕರು ಒಂದಾಗಿ ಮಹಾಮೈತ್ರಿ ಮಾಡಿಕೊಂಡಿದ್ದರು.

ಬಿಜೆಪಿ ಪ್ರಚಾರ ಶುರು: ಏತನ್ಮಧ್ಯೆ, ಉತ್ತರಪ್ರದೇಶ ಚುನಾವಣೆಗೆ ಬಿಜೆಪಿ ಕೂಡ ಬಿರುಸಿನ ಪ್ರಚಾರ ಆರಂಭಿಸಿದೆ. ಶನಿವಾರ ಸಹರಾನ್ಪುರದಲ್ಲಿ ಪರಿವರ್ತನ್ ರ್ಯಾಲಿಯಲ್ಲಿ ಪಾಲ್ಗೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಎಸ್ಪಿ ಮತ್ತು ಬಿಎಸ್ಪಿ ವಿರುದ್ಧ ಕಿಡಿಕಾರಿದ್ದಾರೆ. ಎರಡೂ ಪಕ್ಷಗಳು ರಾಜ್ಯದ ಅಭಿವೃದ್ಧಿಯನ್ನು ಮರೆತಿದೆ. ಬಿಜೆಪಿಯಷ್ಟೇ ರಾಜ್ಯವನ್ನು ಹಳಿಗೆ ತರಲು ಸಾಧ್ಯ ಎಂದಿದ್ದಾರೆ.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios