ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಬಯಲಿಗೆಳೆಯಬೇಕೆಂದು ಕೋರಿಕೊಂಡಿರುವ ಶಶೀಂದ್ರನ್ ಅವರು, ತಾವು ನಿರ್ದೋಷಿ ಎಂದು ಸಾಬೀತಾದ ಬಳಿಕವಷ್ಟೇ ಸಚಿವ ಸ್ಥಾನಕ್ಕೆ ಮರಳುತ್ತೇನೆಂದಿದ್ದಾರೆ.

ತಿರುವನಂತಪುರಂ(ಮಾ. 26): ಮಹಿಳೆಯೊಂದಿಗೆ ಅಶ್ಲೀಲ ಮಾತುಕತೆ ನಡೆಸಿದ ಆರೋಪ ಎದುರಾದ ಹಿನ್ನೆಲೆಯಲ್ಲಿ ಕೇರಳದ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಭಾನುವಾರ ಉದ್ಘಾಟನೆಗೊಂಡ ಮಂಗಳಂ ಎಂಬ ಹೊಸ ಮಲಯಾಲಂ ನ್ಯೂಸ್ ವಾಹಿನಿಯು ಸಚಿವರ ಧ್ವನಿಯದ್ದೆನ್ನಲಾದ ಆಡಿಯೋ ಕ್ಲಿಪ್'ವೊಂದನ್ನು ಪ್ರಸಾರ ಮಾಡಿದೆ. ಇದರಲ್ಲಿ ಸಚಿವರು ಹಾಗೂ ಮಹಿಳೆಯೊಬ್ಬರ ನಡುವೆ ಫೋನ್ ಸಂಭಾಷಣೆ ಇದೆ. ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಆ ಮಹಿಳೆಯು ಸಚಿವರಿಗೆ ಫೋನಾಯಿಸಿರುತ್ತಾಳೆ. ಸಾರಿಗೆ ಸಚಿವರು ಆ ಮಹಿಳೆಯೊಂದಿಗೆ ತೀರಾ ಅಶ್ಲೀಲವಾಗಿ ಮಾತನಾಡುತ್ತಿರುವುದು ಈ ಕ್ಲಿಪ್'ನಿಂದ ತೋರುತ್ತದೆ.

ಸಚಿವರ ಸ್ಪಷ್ಟನೆ:
ಕಟ್ಟಾ ಕಮ್ಯೂನಿಸ್ಟ್ ನೇತಾರರಾದ ಎಕೆ ಶಶೀಂದ್ರನ್ ಅವರು ತಮ್ಮ ಮೇಲಿನ ಆರೋಪವನ್ನು ಸಾರಸಗಟಾಗಿ ತಳ್ಳಿಹಾಕಿದ್ದಾರೆ. ಆದಾಗ್ಯೂ, ಆರೋಪ ಬಂದ ಹಿನ್ನೆಲೆಯಲ್ಲಿ ನೈತಿಕತೆ ದೃಷ್ಟಿಯಿಂದ ತಾನು ರಾಜೀನಾಮೆ ನೀಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಬಯಲಿಗೆಳೆಯಬೇಕೆಂದು ಕೋರಿಕೊಂಡಿರುವ ಶಶೀಂದ್ರನ್ ಅವರು, ತಾವು ನಿರ್ದೋಷಿ ಎಂದು ಸಾಬೀತಾದ ಬಳಿಕವಷ್ಟೇ ಸಚಿವ ಸ್ಥಾನಕ್ಕೆ ಮರಳುತ್ತೇನೆಂದಿದ್ದಾರೆ.

ಕೇರಳದ ಎಡ ಪ್ರಜಾತಾಂತ್ರಿಕ ರಂಗ(ಎಲ್'ಡಿಎಫ್) ನೇತೃತ್ವದ ಸರಕಾರದ ಸಚಿವರು ರಾಜೀನಾಮೆ ನೀಡುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷದ ಅಕ್ಟೋಬರ್'ನಲ್ಲಿ ಕೈಗಾರಿಕೆ ಸಚಿವ ಇಪಿ ಜಯರಾಜನ್ ಅವರು ರಾಜೀನಾಮೆ ನೀಡಿದ್ದರು. ಸರಕಾರೀ ಸ್ವಾಮ್ಯದ ಸಂಸ್ಥೆಯ ಮುಖ್ಯ ಹುದ್ದೆಗಳಿಗೆ ತಮ್ಮ ಕುಟುಂಬದವರನ್ನು ನೇಮಿಸಿದ್ದಾರೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಜಯರಾಜನ್ ರಾಜೀನಾಮೆ ಕೊಟ್ಟಿದ್ದರು.