ಕರ್ನಾಟಕಕ್ಕೆ ಆಘಾತ : ಹೆಗ್ಗಳಿಕೆ ಕಸಿದ ಕೇಂದ್ರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 9:16 AM IST
Airo India Show  Shift To Lucknow
Highlights

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಬಿಗ್ ಶಾಕ್ ನೀಡಿದೆ. ಐತಿಹಾಸಿಕ ಏರ್ ಶೋ ವನ್ನು ಬೆಂಗಳೂರಿನಿಂದ ಲಕ್ನೋಗೆ ವರ್ಗಾವಣೆ ಮಾಡಿ ಅಧಿಕೃತ ಆದೇಶ ನೀಡಿದೆ. 

ಬೆಂಗಳೂರು :  ಪ್ರತಿಷ್ಠಿತ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನ ಬೆಂಗಳೂರಿನಿಂದ ಉತ್ತರ ಪ್ರದೇಶದ ಲಖನೌಗೆ ಸ್ಥಳಾಂತರಗೊಳ್ಳುವುದು ಇದೀಗ ಅಧಿಕೃತ. ತನ್ಮೂಲಕ ಏಷ್ಯಾದ ಅತಿದೊಡ್ಡ ವಾಯು ಪ್ರದರ್ಶನದ ಕೇಂದ್ರವೆನಿಸಿದ ಬೆಂಗಳೂರಿನ ಹೆಗ್ಗಳಿಕೆ ಕಸಿದುಕೊಂಡಂತಾಗಿದೆ.

22 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೊದಲ ಆವೃತ್ತಿ ಕಂಡ ‘ಏರೋ ಇಂಡಿಯಾ’ ಪ್ರಸ್ತುತ ಏಷ್ಯಾದ ಅತಿ ದೊಡ್ಡ ಹಾಗೂ ಜಾಗತಿಕ ಮಟ್ಟದಲ್ಲಿ ಮಹತ್ವದ ವೈಮಾನಿಕ ಪ್ರದರ್ಶನವಾಗಿ ಹೆಸರು ಮಾಡಿದೆ. ಇದಕ್ಕೆ ಕಾರಣೀಭೂತವಾದ ಹಾಗೂ ಸತತ ಹನ್ನೊಂದು ಆವೃತ್ತಿಗಳನ್ನು ಯಶಸ್ವಿಯಾಗಿ ಆಯೋಜಿಸಿ ವಿಶ್ವಮಟ್ಟದಲ್ಲಿ ಮನ್ನಣೆ ದೊರಕಿಸಿಕೊಟ್ಟಿದ್ದ ಬೆಂಗಳೂರು ಈ ಬಾರಿ ಅವಕಾಶ ಕಳೆದುಕೊಂಡಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಚಿವರ ತೀವ್ರ ಒತ್ತಡದ ನಡುವೆಯೂ ಕರ್ನಾಟಕದ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್‌ ಸಚಿವರಾಗಿರುವ ರಕ್ಷಣಾ ಇಲಾಖೆಯು ಸ್ಥಳಾಂತರಿಸಲು ನಿರ್ಧಾರ ಮಾಡಿದೆ. ಈ ಬಗ್ಗೆ ಸಚಿವ ಆರ್‌.ವಿ. ದೇಶಪಾಂಡೆ ಅವರು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದು, ಕೇಂದ್ರದ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏರೋ ಇಂಡಿಯಾ ಪ್ರದರ್ಶನವನ್ನು ಬೆಂಗಳೂರಿನಿಂದ ಉತ್ತರ ಪ್ರದೇಶದ ಲಖನೌಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರೇ ಈ ವಿಚಾರವನ್ನು ತಮಗೆ ಖಚಿತ ಪಡಿಸಿದರು ಎಂದು ದೇಶಪಾಂಡೆ ಹೇಳಿದರು.

ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಕನಿಷ್ಠ ರಾಜ್ಯ ಸರ್ಕಾರದ ಜತೆ ಚರ್ಚೆ ಮಾಡಬೇಕಿತ್ತು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸ್ಥಳಾಂತರ ಮಾಡದಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಿದ್ದರು. ಆದರೂ ಬೆಲೆ ಕೊಡದೆ ಏಕಾಏಕಿ ಸ್ಥಳಾಂತರ ಮಾಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ನಿರ್ಧಾರದಿಂದ ರಕ್ಷಣಾ ಹಾಗೂ ವೈಮಾನಿಕ ಕ್ಷೇತ್ರದ ರಾಜಧಾನಿಯಾಗಿರುವ ಬೆಂಗಳೂರಿಗೆ ಭಾರಿ ಹಿನ್ನಡೆ ಉಂಟಾದಂತಾಗಿದೆ. ಜತೆಗೆ ಏರೋ ಇಂಡಿಯಾಗೆ ದೊರಕುತ್ತಿದ್ದು ಅಭೂತ ಪೂರ್ವ ಸ್ಪಂದನೆ, ಇದರಿಂದ ರಾಜ್ಯಕ್ಕೆ ಬರುತ್ತಿರುವ ಹೊಸ ಉದ್ದಿಮೆಗಳು, ಪ್ರವಾಸೋದ್ಯಮ ಎಲ್ಲಾ ಕ್ಷೇತ್ರಗಳಲ್ಲೂ ಭಾರಿ ನಷ್ಟಉಂಟಾಗಲಿದೆ. 1996ರಲ್ಲಿ ಮೊದಲ ಆವೃತ್ತಿಗೆ ಬೆಂಗಳೂರಿನ ಯಲಹಂಕ ಏರ್‌ಫೋರ್ಸ್‌ ಸ್ಟೇಷನ್‌ನ್ನು ವೇದಿಕೆಯಾಗಿಸಿಕೊಂಡು ರಕ್ಷಣಾ ಇಲಾಖೆ ವೈಮಾನಿಕ ಪ್ರದರ್ಶನ ಏರ್ಪಡಿಸಿತ್ತು. ಮೊದಲ ಆವೃತ್ತಿಯಿಂದಲೂ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಪ್ರದರ್ಶನಕ್ಕೆ ವಿಶ್ವ ಮಟ್ಟದಲ್ಲಿ ಮನ್ನಣೆ ದೊರೆಯಿತು.

ಬೆಂಗಳೂರಿಗರಿಗೆ ತೀವ್ರ ನಿರಾಸೆ:

ಪ್ರತಿ ಎರಡು ವರ್ಷಕ್ಕೊಮ್ಮೆ ನಗರದಲ್ಲಿ ನಡೆಯುತ್ತಿದ್ದ ಏರೋ ಇಂಡಿಯಾ ಕೇವಲ ಬೃಹತ್‌ ರಕ್ಷಣಾ ಒಪ್ಪಂದಗಳಿಗೆ ಮಾತ್ರವೇ ವೇದಿಕೆಯಾಗಿರಲಿಲ್ಲ. ವಿವಿಧ ದೇಶಗಳ ನಡುವೆ ಲಕ್ಷಾಂತರ ಕೋಟಿ ಮೌಲ್ಯದ ಯುದ್ಧ ವಿಮಾನ, ಯುದ್ಧಸಾಮಗ್ರಿಗಳ ಖರೀದಿ ಒಪ್ಪಂದಕ್ಕೆ ವೇದಿಕೆಯಾಗುತ್ತಿದ್ದ ಏರೋ ಇಂಡಿಯಾ ಬೆಂಗಳೂರಿಗರು ಹಾಗೂ ದೇಶ-ವಿದೇಶದಿಂದ ಆಗಮಿಸುತ್ತಿದ್ದ ಪ್ರವಾಸಿಗರನ್ನೂ ಅಷ್ಟೇ ಆಕರ್ಷಿಸಿತ್ತು. ದೇಶ-ವಿದೇಶದ ವೈಮಾನಿಕ ಪ್ರದರ್ಶನ ತಂಡಗಳು ನೀಡುತ್ತಿದ್ದು ಅದ್ಭುತ ಪ್ರದರ್ಶನಗಳಿಗೆ ಜನ ಮನಸೋತಿದ್ದರು. ಕೊನೆಯ ಎರಡು ದಿನಗಳ ಕಾಲ ಸಾರ್ವಜನಿಕರು ವೈಮಾನಿಕ ಪ್ರದರ್ಶನ ಕಣ್ತುಂಬಿಕೊಳ್ಳುತ್ತಿದ್ದರು. ಇಂತಹ ಸದವಕಾಶ 22 ವರ್ಷಗಳ ಬಳಿಕ ಬೆಂಗಳೂರು ನಗರ ನಾಗರಿಕರು ತಪ್ಪಿಸಿಕೊಳ್ಳಲಿದ್ದಾರೆ. ಈ ಮೂಲಕ ಬೆಂಗಳೂರಿಗರಿಗೆ ತೀವ್ರ ನಿರಾಸೆ ಉಂಟಾಗಿದೆ.

ರಕ್ಷಣಾ ವಲಯದ ಕಂಪನಿಗಳಿಗೂ ಆತಂಕ:

ಫೆಬ್ರುವರಿ 2019ರಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ವೈಮಾನಿಕ ಪ್ರದರ್ಶನವನ್ನು ಲಖನೌನ ಬಕ್ಷಿ ಕಾ ತಾಲಾಬ್‌ ಏರ್‌ ಸ್ಟೇಷನ್‌ ನಡೆಸಲು ಉದ್ದೇಶಿಸಲಾಗಿದೆ. ಅಲ್ಲದೆ, ಪ್ರಸಕ್ತ ಸಾಲಿನ ಅಕ್ಟೋಬರ್‌ 27ರಿಂದ ನವೆಂಬರ್‌ 4ರ ಒಳಗಾಗಿ ಮಾಡಲಾಗುವುದು ಎಂದು ಹೇಳಲಾಗಿದೆ.

ಹಠಾತ್‌ ಸ್ಥಳ ಬದಲಾವಣೆಯಿಂದ ವೈಮಾನಿಕ ಕಂಪನಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಬಹುತೇಕ ಕಂಪನಿಗಳು ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲು ಒಂದು ವರ್ಷದ ಮೊದಲೇ ಪೂರ್ವ ತಯಾರಿ ಮಾಡಿಕೊಂಡಿರುತ್ತವೆ. ಹಲವು ವೈಮಾನಿಕ ಕಂಪನಿಗಳು ತಮ್ಮ ವೆಬ್‌ಸೈಟ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸುವುದಾಗಿಯೇ ಹೆಮ್ಮೆಯಿಂದ ಘೋಷಿಸಿಕೊಂಡಿವೆ. ಇದೀಗ ಏಕಾಏಕಿ ಸ್ಥಳ ಬದಲಾವಣೆಯಿಂದ ತೀವ್ರ ಸಮಸ್ಯೆಗೆ ಸಿಲುಕಲಿವೆ ಎಂದು ತಿಳಿದುಬಂದಿದೆ. ವಿದೇಶಿ ಕಂಪನಿಗಳು ಕಡಿಮೆ ಅವಧಿಯಲ್ಲಿ ಬದಲಾದ ಸ್ಥಳದಲ್ಲಿ ಯುದ್ಧ ವಿಮಾನ ಹಾಗೂ ಸಾಮಗ್ರಿಗಳನ್ನು ಪ್ರದರ್ಶಿಸಲು ಸಾಧ್ಯವೇ ಎಂಬ ಅನುಮಾನ ಮೂಡಿದೆ.

loader