ಬೆಂಗಳೂರು :  ದೇಶದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2019 ಆರಂಭಕ್ಕೆ ಎರಡು ದಿನ ಬಾಕಿ ಇರುವ ಮುನ್ನವೆ (ಫೆ.18) ನಗರದ ಯಲಹಂಕ ವಾಯುನೆಲೆಯಲ್ಲಿ ರಫೇಲ್, ತೇಜಸ್, ಸೂರ್ಯಕಿರಣ ಸೇರಿದಂತೆ ವಿವಿಧ ದೇಶ-ವಿದೇಶಿ ಯುದ್ಧ ವಿಮಾನಗಳು ಪ್ರದರ್ಶನ ನಡೆಸಲಿವೆ.

12ನೇ ಏರೋ ಇಂಡಿಯಾ ಶೋಗೆ ದಿನಗಣನೆ ಆರಂಭವಾಗಿದ್ದು, ಫೆ. 20ರಂದು ಉದ್ಘಾಟನೆಗೊಳ್ಳಲಿದೆ. ಐದು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ಯುದ್ಧ ಸಾಮಗ್ರಿಗಳ ಪ್ರದರ್ಶನ, ಯುದ್ಧ ಹಾಗೂ ನಾಗರೀಕ ಸೇವಾ ವಿಮಾನಗಳು ಶಕ್ತಿ ಪ್ರದರ್ಶನ ಮಾಡಲಿವೆ. 

ಆದರೆ, ಪ್ರಸಕ್ತ ವರ್ಷ ಏರೋ ಇಂಡಿಯಾ ಶೋ ಉದ್ಘಾಟನೆಗೆ 2 ದಿನ ಬಾಕಿ ಇರುವಂತೆ ಫೆ.18ರ ಸೋಮವಾರ ಪ್ರಾಯೋಗಿಕ ಪ್ರದರ್ಶನ ನಡೆಸುವುದಕ್ಕೆ ಭಾರತೀಯ ರಕ್ಷಣಾ ಇಲಾಖೆ ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ವಿಮಾನಗಳ ವೈಮಾನಿಕ ಪ್ರದರ್ಶನ ಮತ್ತು ಯುದ್ಧ ಸಾಮಗ್ರಿಗಳ ಪ್ರದರ್ಶನ ನಡೆಯಲಿದೆ. ಈಗಾಗಲೇ ಬಂದಿಳಿದಿರುವ 3 ರಫೇಲ್ ಯುದ್ಧ ವಿಮಾನಗಳಲ್ಲಿ 2 ವಿಮಾನಗಳು ವೈ ಮಾನಿಕ ಪ್ರದರ್ಶನ ನಡೆಸಲಿದ್ದು, ಇನ್ನೊಂದು ವಿಮಾನವನ್ನು ಮಳಿಗೆಯಲ್ಲಿ ಪ್ರದರ್ಶನಕ್ಕೆ ಇರಿಸಲಾಗುವುದು. ಸೂರ್ಯ ಕಿರಣ, ತೇಜಸ್, ಬೋಯಿಂಗ್ ಸಿ-17  ಗ್ಲೋಬ್ ವಿಮಾನ ಸೇರಿದಂತೆ ವಿವಿಧ ವಿಮಾನ ಮತ್ತು ಹೆಲಿಕಾಪ್ಟರ್ ಪ್ರದರ್ಶನ ನೀಡಲಿವೆ. 

ಫೆ.18ರ ಬೆಳಗ್ಗೆ 8.30ಕ್ಕೆ ಉದ್ಘಾಟನೆ ನಡೆಯಲಿದ್ದು, 9 .20ಕ್ಕೆ ರಾಷ್ಟ್ರಗೀತೆ ಮತ್ತು ಧ್ವಜಾರೋಹಣ ನಂತರ ವಿಶೇಷ ಪ್ರದರ್ಶನ, ಮಳಿಗಳ ಪ್ರದರ್ಶನ ಆರಂಭವಾಗಲಿದೆ. ನಿರಂತರವಾಗಿ ಮಧ್ಯಾಹ್ನ 1.30ರ ವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 1.30ರಿಂದ 2.30ರ ವರೆಗೆ ಊಟದ ವಿರಾಮ ನೀಡಲಾಗುತ್ತದೆ. ತದ ನಂತರ ಮತ್ತೆ 2.30 ರಿಂದ 6.30ರ ವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. 

50ಕ್ಕೂ ಹೆಚ್ಚಿನ ವಿಮಾನಗಳ ಹಾರಾಟ: ಫ್ಲೈಯಿಂಗ್ ಡಿಸ್‌ಪ್ಲೇ ವಿಭಾಗದಲ್ಲಿ ವಿವಿಧ ಬಗೆಯ 36 ಏರ್‌ಕ್ರಾಫ್ಟ್, ಇತರೆ ಏಜೆನ್ಸಿಗಳ ಏಳು ಏರ್‌ಕ್ರಾಫ್ಟ್ ಮತ್ತು ಸ್ಟ್ಯಾಟಿಕ್ ಡಿಸ್‌ಪ್ಲೇ ವಿಭಾಗದಲ್ಲಿ ಐಎಎಫ್ ಏರ್‌ಕ್ರಾಫ್ಟ್ ಹಾಗೂ ಎಚ್‌ಎಎಲ್ ಮತ್ತು ಇತರೆ ಏಜೆನ್ಸಿಗಳ ತಲಾ 11 ಏರ್‌ಕ್ರಾಫ್ಟ್ ಪ್ರದರ್ಶನ ನಡೆಸಲಿವೆ. ರಕ್ಷಣಾ ಕ್ಷೇತ್ರದ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕಾಗಿ ಈಗಾಗಲೇ 208 ದೇಶಿ ಹಾಗೂ 165 ವಿದೇಶಿ ಕಂಪೆನಿಗಳು ನೋಂದಣಿ ಮಾಡಿಕೊಂಡು ಪ್ರದರ್ಶನಕ್ಕೆ ಸಜ್ಜುಗೊಂಡಿವೆ.