ಇನ್ನೇನು ಕೆಲಸ ಮುಗಿಸಿ ಎಲ್ಲರೂ ಮನೆಗೆ ಹೋಗುವ ಸಮಯ, ಅಷ್ಟರಲ್ಲೇ ಭಾರೀ ಸ್ಫೋಟದ ಸದ್ದು. ಬೆಂಗಳೂರಿನ ವಸಂತನಗರದ ಎಂಟನೇ ಕ್ರಾಸ್'ನಲ್ಲಿ ಬಲೂನ್ಗೆ ಗಾಳಿ ತುಂಬುವ ಸಿಲಿಂಡರ್ ಸ್ಫೋಟಗೊಂಡು ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಬೆಂಗಳೂರು(ಜ.28): ಇನ್ನೇನು ಕೆಲಸ ಮುಗಿಸಿ ಎಲ್ಲರೂ ಮನೆಗೆ ಹೋಗುವ ಸಮಯ, ಅಷ್ಟರಲ್ಲೇ ಭಾರೀ ಸ್ಫೋಟದ ಸದ್ದು. ಬೆಂಗಳೂರಿನ ವಸಂತನಗರದ ಎಂಟನೇ ಕ್ರಾಸ್'ನಲ್ಲಿ ಬಲೂನ್ಗೆ ಗಾಳಿ ತುಂಬುವ ಸಿಲಿಂಡರ್ ಸ್ಫೋಟಗೊಂಡು ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ರಾತ್ರಿ ಒಂಭತ್ತು ಗಂಟೆ ಸಮಯ, ವಸಂತನಗರದ ಎಂಟನೇ ಕ್ರಾಸ್'ನಲ್ಲಿ ತರಕಾರಿ ಮಾರುತ್ತಿದ್ದ ಹೆಣ್ಣು ಮಗಳು ಮನೆಗೆ ಹೊರಡಲು ಕಾತುರ. ಮೆಡಿಕಲ್ ಸ್ಟೋರ್'ನಲ್ಲಿ ಕೆಲಸ ಮಾಡುತ್ತಿದ್ದವನಿಗೆ ವ್ಯವಹಾರ ಮುಗಿಸಿ ಬಿಡುವ ಆತುರ. ಬಲೂನುಗಳನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವನೂ ಅದೇ ದಾರಿಯಲ್ಲಿ ಸ್ಕೂಟರ್'ನಲ್ಲಿ ಮನೆಗೆ ಹೋಗುತ್ತಿದ್ದ. ಇದ್ದಕ್ಕಿದ್ದಂತೆ ಬಲೂನಿಗೆ ಗಾಳಿ ತುಂಬುವ ಹೀಲಿಯಂನ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಬಲೂನು ವ್ಯಾಪಾರಿ ಮುಖೇಶ್ ದೇಹ ಸುಮಾರು ಹತ್ತು ಅಡಿ ದೂರಕ್ಕೆ ಸಿಡಿದಿದೆ.
ಘಟನೆಯಲ್ಲಿ ತರಕಾರಿ ಮಾರುವ ಲಕ್ಷ್ಮೀ, ಅಮುದಾ ಮತ್ತು ಮೆಡಿಕಲ್ ಸ್ಟೋರ್'ನಲ್ಲಿ ಕೆಲಸ ಮಾಡುತ್ತಿದ್ದ ಯುವರಾಜ್ ಮೂವರೂ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಜೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಲೂನು ವ್ಯಾಪಾರಿ ಮುಖೇಶ್ ತಲೆ, ಮತ್ತು ಎದೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು ಜೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಗಂಭೀರ ಗಾಯಗೊಂಡ ಮುಖೇಶ್'ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೀಲಿಯಂ ಸಿಲಿಂಡರ್ನ ಫ್ರೆಷರ್ನಿಂದಾಗಿ ಅದು ಸ್ಫೋಟಗೊಂಡಿದೆ. ಸಿಲಿಂಡರ್'ನ್ನು ಆಗತಾನೆ ತುಂಬಿಸಿಕೊಂಡು ಬಂದಿದ್ರಿಂದ ಘಟನೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
