ಪಂಜಾಬ್'ನ ಬಟಿಂಡಾದಿಂದ ಕಳೆದ 12 ದಿನಗಳಿಂದ ನಾಪತ್ತೆಯಾಗಿದ್ದ ವಾಯುಸೇನೆಯ ಯೋಧ ವಿಪಿನ್ ಶುಕ್ಲಾ ಮೃತದೇಹದ ತುಂಡುಗಳು 16 ಬ್ಯಾಗ್'ಗಳಲ್ಲಿ ಮನೆಯೊಂದರಲ್ಲಿ ಪತ್ತೆಯಾಗಿವೆ. ಈ ಮೂಲಕ ಯೋಧನೊಬ್ಬನ ನಾಪತ್ತೆ ಪ್ರಕರಣ, ಕೊಲೆ ಪ್ರಕರಣವಾಗಿ ಟ್ವಿಸ್ಟ್ ಪಡೆದುಕೊಂಡಿದೆ.
ಪಂಜಾಬ್(ಫೆ.22): ಪಂಜಾಬ್'ನ ಬಟಿಂಡಾದಿಂದ ಕಳೆದ 12 ದಿನಗಳಿಂದ ನಾಪತ್ತೆಯಾಗಿದ್ದ ವಾಯುಸೇನೆಯ ಯೋಧ ವಿಪಿನ್ ಶುಕ್ಲಾ ಮೃತದೇಹದ ತುಂಡುಗಳು 16 ಬ್ಯಾಗ್'ಗಳಲ್ಲಿ ಮನೆಯೊಂದರಲ್ಲಿ ಪತ್ತೆಯಾಗಿವೆ. ಈ ಮೂಲಕ ಯೋಧನೊಬ್ಬನ ನಾಪತ್ತೆ ಪ್ರಕರಣ, ಕೊಲೆ ಪ್ರಕರಣವಾಗಿ ಟ್ವಿಸ್ಟ್ ಪಡೆದುಕೊಂಡಿದೆ.
ಕಳೆದ 13 ದಿನಗಳ ಹಿಂದೆ ನಾಪತ್ತೆಯಾಗಿದ್ದ 27 ವರ್ಷದ ವಾಯುಸೇನೆಯ ಜವಾನ ವಿಪಿನ್ ಶುಕ್ಲಾರನ್ನು ಪತ್ತೆ ಹಚ್ಚಲು ಅಲ್ಲಿನ ಪೊಲೀಸರು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಅವರ ಪ್ರಯತ್ನವೆಲ್ಲಾ ವಿಫಲವಾಗಿತ್ತು. ವಿಪಿನ್ ಶುಕ್ಲಾ ನಾಪತ್ತೆಯಾದ 12 ದಿನಗಳ ಬಳಿಕ ಪಕ್ಕದ ಮನೆಯಿಂದ ಕೆಟ್ಟ ವಾಸನೆ ಬರಲಾರಂಭಿಸಿದ್ದು, ಈ ಕುರಿತಾಗಿ ಯೋಧನ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಪರಿಶೀಲನೆ ನಡೆಸಿದ ಪೊಲೀಸರಿಗೆ ವಿಪಿನ್'ರವರ ಮೃತದೇಹದ ತುಂಡುಗಳಿದ್ದ 16 ಪ್ಲಾಸ್ಟಿಕ್ ಬ್ಯಾಗ್'ಗಳು ಮನೆಯಲ್ಲಿ ದೊರಕಿವೆ ಎಂಬುವುದಾಗಿ 'ಹಿಂದೂಸ್ಥಾನ್ ಟೈಮ್ಸ್' ವರದಿ ಮಾಡಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸರು 'ಆರೋಪಿ ತನ್ನ ಪತ್ನಿ ಹಾಗೂ ಮೈದುನನೊಂದಿಗೆ ಸೇರಿ ಈ ಹತ್ಯೆ ಮಾಡಿ ಮೊದಲು ಟ್ರಂಕ್ ಒಂದರಲ್ಲಿ ಬಚ್ಚಿಟ್ಟಿದ್ದ. ಬಳಿಕ ದೇಹವನ್ನು ತುಂಡರಿಸಿ 16 ಪ್ಲಾಸ್ಟಿಕ್ ಬ್ಯಾಗ್'ಗಳಲ್ಲಿ ತುಂಬಿಸಿ, ಫ್ರಿಜ್ ಹಾಗೂ ಕಪಾಟಿನಲ್ಲಿ ಇರಿಸಿದ್ದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ' ಎಂದು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸುಲೇಶ್ ಕುಮಾರ್ ಹಾಗೂ ಆತನ ಪತತ್ನಿ ಅನುರಾಧಾ ಎಂದು ತಿಳಿದು ಬಂದಿದೆ.
ಕೊಡಲಿಯಲ್ಲಿ ಕೊಲೆ ಮಾಡಲಾಗಿತ್ತು!
ಆರೋಪಿ ಸುಲೇಶ್ ಕುಮಾರ್ ಕೂಡಾ ಓರ್ವ ಯೋಧನಾಗಿದ್ದು, ವಾಯುಸೇನೆಯಲ್ಲಿ ಸಾರ್ಜೆಂಟ್ ಹುದ್ದೆಯನ್ನು ಅಲಂಕರಿಸಿದ್ದಾರೆ. ಇನ್ನು ಈ ಕೊಲೆಯ ವಿಚಾರವಾಗಿ ತಪ್ಪೊಪ್ಪಿಕೊಂಡಿರುವ ಸುಲೇಶ್ 'ವಿಪಿನ್ ಶುಕ್ಲಾ ಹಾಗೂ ನನ್ನ ಪತ್ನಿ ಅನುರಾಧಾ ನಡುವೆ ನೈತಿಕ ಸಂಬಂಧವಿತ್ತು ಹಾಗೂ ಈ ವಿಚಾರ ಎಲ್ಲರಿಗೂ ತಿಳಿದಿತ್ತು. ಕಳೆದ ಎರಡು ವರ್ಷಗಳ ಹಿಂದೆ ಆತ ನನ್ನ ಪತ್ನಿಯೊಡನೆ ಅಸಭ್ಯವಾಗಿ ವರ್ತಿಸಿದ್ದು, ಅಂದು ನನ್ನ ಪತ್ನಿ ಇದನ್ನು ಖಂಡಿಸಿದ್ದಳು. ಆದರೆ ಇವೆಲ್ಲದರ ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧವೇರ್ಪಟ್ಟಿತ್ತು. ಈ ವಿಚಾರ ನನ್ನ ಗಮನಕ್ಕೆ ಬಂದಾಗ ವಿಪಿನ್'ನನ್ನು ಕೊಲ್ಲುವ ಯೋಚನೆ ಮನಸ್ಸಲ್ಲಿ ಮೂಡಿತ್ತು. ಇದಕ್ಕಾಗಿ ನಾನು ನೌಕಾಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನನ್ನ ಮೈದುನ ಶಿಶುಭೂಷಣ್'ನ ಸಹಾಯ ಪಡೆದಿದ್ದೆ. ಯೋಜನೆಯಂತೆ ಫೆಬ್ರವರಿ 8 ರಂದು ಮನೆ ಬದಲಾಯಿಸಿಕೊಳ್ಳುವ ನೆಪದಲ್ಲಿ ವಿಪಿನ್'ನನ್ನು ನಾನು ಆಹ್ವಾನಿಸಿ ಕೊಡಲಿಯಿಂದ ಕೊಲೆ ಮಾಡಿದೆ. ಬಳಿಕ ಮೃತದೇಹವನ್ನು ಟ್ರಂಕ್ ಒಂದರಲ್ಲಿ ತುಂಬಿಸಿ ನಮಗಾಗಿ ನಿರ್ಮಿಸಿದ್ದ ಕ್ವಾಟ್ರಸ್'ಗೆ ಸಾಗಿಸಿ, ಅಲ್ಲಿ ದೇಹವನ್ನು ತುಂಡರಿಸಿ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟೆ' ಎಂದು ತಿಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಸದ್ಯ ವಿಪಿನ್'ರನ್ನು ಹತ್ಯೆಗೈದ ದಂಪತಿಗಳನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ ಶಿಶುಭೂಷಣ್'ನನ್ನು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ.
