ಜೈಪುರ್(ಮೇ.10): ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಕರಾಚಿಯಿಂದ ಸರಂಜಾಮು ಹೊತ್ತು ಸಾಗುತ್ತಿದ್ದ ಸರಕು ಸಾಗಾಣಿಕೆ ವಿಮಾನವೊಂದನ್ನು, ಭಾರತೀಯ ವಾಯುಗಡಿ ಉಲ್ಲಂಘಿಸಿದ ಆರೋಪದ ಮೇಲೆ ತುರ್ತು ಭೂಸ್ಪರ್ಶ ಮಾಡುವಂತೆ ವಾಯುಸೇನೆ ಒತ್ತಾಯಿಸಿರುವ ಘಟನೆ ನಡೆದಿದೆ.

ಕರಾಚಿಯಿಂದ ಸರಂಜಾಮು ಹೊತ್ತು ತೆರಳುತ್ತಿದ್ದ ಜಾರ್ಜಿಯಾ ನಿರ್ಮಿತ Antonov An-12 ಎಂಬ ಸರಕು ಸಾಗಾಣಿಕೆ ವಿಮಾನ ಅಕ್ರಮವಾಗಿ ಭಾರತೀಯ ವಾಯುಗಡಿಯೊಳಗೆ ಪ್ರವೇಶಿಸಿದೆ.

ಕೂಡಲೇ ಕಾರ್ಯಾಚರಣೆಗಿಳಿದ ವಾಯುಸೇನೆ ತನ್ನ ಯುದ್ಧ ವಿಮಾನದ ಸಹಾಯದಿಂದ, ಸರಕು ಸಾಗಾಣಿಕೆ ವಿಮಾನವನ್ನು ಜೈಪುರ್ ವಿಮಾನ ನಿಲ್ದಾಣದಲ್ಲಿ ಇಳಿಸಿದೆ.

ಸದ್ಯ ವಿಮಾನದ ಪೈಲೆಟ್ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ವಾಯುಸೇನೆ, ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಪೈಲೆಟ್’ನ ಅಚಾತುರ್ಯದಿಂದಾಗಿ ವಿಮಾನ ಭಾರತದ ಗುಜರಾತ್ ವಾಯುಗಡಿ ಪ್ರವೇಶಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.