ನವದೆಹಲಿ(ಅ.04): ಪಾಕಿಸ್ತಾನ ವಿರುದ್ಧದ ವೈಮಾನಿಕ ಸಂಘರ್ಷದ ವೇಳೆ ಕಳೆದ ಫೆ.27ರಂದು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್'ನ್ನು ನಮ್ಮದೇ  ಕ್ಷಿಪಣಿ ತಪ್ಪಾಗಿ ಹೊಡೆದುರುಳಿಸಿದೆ ಎಂದು ನೂತನ ವಾಯುಸೇನಾಧ್ಯಕ್ಷ RKS ಬದೌರಿಯಾ ಹೇಳಿದ್ದಾರೆ.

ಈ ಘಟನೆಯನ್ನು ದೊಡ್ಡ ತಪ್ಪು ಎಂದು ಬಣ್ಣಿಸಿರುವ ಬದೌರಿಯಾ, ಘಟನೆಯ ಕುರಿತಾದ ಆಂತರಿಕ ತನಿಖೆ ಮುಕ್ತಾಯವಾಗಿದ್ದು ಇಬ್ಬರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. 

ವಾಯುಪಡೆಯ ಪ್ರತಿ ಹೆಲಿಕಾಪ್ಟರ್'ನಲ್ಲೂ ಶತ್ರು ಹಾಗೂ ಮಿತ್ರ ಪಡೆಗಳನ್ನು ಗುರುತಿಸುವ ಸಾಧನ ಇರುತ್ತದೆ. ಪತನಗೊಂಡ ಹೆಲಿಕಾಪ್ಟರ್'ನಲ್ಲಿ ಈ ಸಾಧನವನ್ನು ಬಂದ್ ಮಾಡಲಾಗಿತ್ತು ಎಂದು ವಾಯುಸೇನೆ ಮುಖ್ಯಸ್ಥರು ತಿಳಿಸಿದ್ದಾರೆ.

ಆದರೆ ನಮ್ಮಿಂದಾದ ತಪ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದಿರುವ ಬದೌರಿಯಾ, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ವೈಮಾನಿಕ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ಭಾರತೀಯ ಹೆಲಿಕಾಪ್ಟರ್ ಪತನಗೊಂಡಿದ್ದು. ಹೆಲಿಕಾಪ್ಟರ್ ಪತನಗೊಂಡಿದ್ದರ ಹಿಂದೆ ಸಾಕಷ್ಟು ಗೊಂದಲ ಹಾಗೂ ಅನುಮಾನಗಳು ಸೃಷ್ಟಿಯಾಗಿತ್ತು. ಆಂತರಿಕ ತನಿಖೆಯ ಬಳಿಕ ಸತ್ಯ ಹೊರ ಬಿದಿದ್ದೆ.