ನವದೆಹಲಿ(ಸೆ.30): ಭಾರತೀಯ ವಾಯುಸೇನೆ ನೂತನ ಮುಖ್ಯಸ್ಥರಾಗಿ ರಾಕೇಶ್ ಕುಮಾರ್ ಸಿಂಗ್ ಬದೌರಿಯಾ ಅಧಿಕಾರ ಸ್ವೀಕರಿಸಿದ್ದಾರೆ.

ವಾಯುಸೇನೆ ಮುಖ್ಯಸ್ಥ ಬಿಎಸ್.ಧನೋವಾ ನಿವೃತ್ತಿ ಬಳಿಕ ತೆರವಾದ ಮುಖ್ಯಸ್ಥರ ಸ್ಥಾನಕ್ಕೆ, RKS ಬದೌರಿಯಾ ಅವರನ್ನು ನೇಮಿಸಿ ಕಳೆದ ಸೆ.19 ರಂದು ಕೇಂದ್ರ ರಕ್ಷಣಾ ಇಲಾಖೆ ಆದೇಶ ಹೊರಡಿಸಿತ್ತು.

ಅದರಂತೆ ಬಿಎಸ್ ಧನೋವಾ ಅವರಿಂದ ಅಧಿಕಾರ ಸ್ವೀಕರಿಸಿದ ಬದೌರಿಯಾ, ವಾಯುಸೇನೆಯ ಬಲವರ್ಧನೆ ತಮ್ಮ ಪ್ರಮುಖ ಆದ್ಯತೆ ಎಂದು ಹೇಳಿದ್ದಾರೆ.

ಅಧಿಕಾರ ಸ್ವೀಕರಿಸಿ ಮಾತನಾಡಿದ ಬದೌರಿಯಾ, ವಾಯುಪಡೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಆಗಸದ ರಕ್ಷಣೆಗೆ ಒತ್ತು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಭಾರತೀಯ ವಾಯಪಡೆಗೆ ಶೀಘ್ರದಲ್ಲೇ ರಫೆಲ್ ಯುದ್ಧ ವಿಮಾನ ಸೇರ್ಪಡೆಯಾಗಲಿದ್ದು, ನಮ್ಮ ಆಗಸವನ್ನು ಸೀಳುವ ಧೈರ್ಯ ಮಾಡುವ ಯಾರೇ ಆದರೂ ಸೂಕ್ತ ಪಾಠ ಕಲಿಸಲಾಗುವುದು ಎಂದು ಪರೋಕ್ಷವಾಗಿ ಪಾಕಿಸ್ತಾನ ಹಾಗೂ ಚೀನಾಗೆ ಎಚ್ಚರಿಕೆ ನೀಡಿದರು.

1980ರಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡ ಬದೌರಿಯಾ, ಸ್ವಾರ್ಡ್ ಆಫ್ ಹಾನರ್ ಪ್ರಶಸ್ತಿಗೆ ಭಾಜನಾರಾದ ವಾಯಪಡೆ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. RKS ಬದೌರಿಯಾ 26 ವಿವಿಧ ಪ್ರಕಾರದ ಯುದ್ಧ ವಿಮಾನ, ಸರಕು ಸಾಗಾಣಿಕೆ ವಿಮಾನ ಸೇರಿ ಒಟ್ಟು 4,250 ಗಂಟೆ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.