ನವದೆಹಲಿ(ಅ. 04): ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ತಮಿಳುನಾಡು ಸಂಸದರ ಪ್ರಯತ್ನ ವಿಫಲವಾದ ಘಟನೆ ಮಂಗಳವಾರ ನಡೆದಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರುದ್ಧ ಕೇಂದ್ರ ಸರಕಾರ ಸುಪ್ರೀಂಕೋರ್ಟ್'ನಲ್ಲಿ ಅಫಿಡವಿಟ್ ಸಲ್ಲಿಸಿರುವ ಕ್ರಮವನ್ನು ಖಂಡಿಸುವ ಸಲುವಾಗಿ ಎಐಎಡಿಎಂಕೆ ಸಂಸದರು ಇಂದು ಪ್ರಧಾನಿಯನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಆದರೆ, ಯಾವುದೇ ಪೂರ್ವಾನುಮತಿ ಇಲ್ಲದೆಯೇ ಸಂಸದರು ಪ್ರಧಾನಿಯನ್ನು ಭೇಟಿಯಾಗಲು ಯತ್ನಿಸಿದ್ದರಿಂದ ಭೇಟಿಯ ಅವಕಾಶ ಸಿಗಲಿಲ್ಲ. ಇದರಿಂದ ಆಕ್ರೋಶಗೊಂಡ ಎಐಎಡಿಎಂಕೆ ಸಂಸದರು ಪ್ರಧಾನಿ ಕಾರ್ಯಾಲಯದ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದರು. ಬೆಳಗ್ಗೆ 11 ಗಂಟೆಗೆ ವಿಜಯ್'ಚೌಕ್'ನಿಂದ ಮೆರವಣಿಗೆ ಹೊರಟ ತಮಿಳುನಾಡು ಸಂಸದರು ಪ್ರಧಾನಿ ಕಚೇರಿಗೆ ಮುತ್ತಿಗೆ ಹಾಕಲೂ ಯತ್ನಿಸಿದರು.