ಚೆನ್ನೈ(ಅ.06): ತಲೆ ಮೇಲೆ ಬ್ಯಾನರ್ ಬಿದ್ದು ಮಹಿಳಾ ಟೆಕ್ಕಿಯೋರ್ವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಎಐಎಡಿಎಂಕೆ ಹಿರಿಯ ನಾಯಕ ಸಿ. ಪೊನ್ನಯನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಟೆಕ್ಕಿ ಶುಭಶ್ರೀ ರವಿ ಸಾವಿಗೆ ಕಾರಣವಾದ ಬ್ಯಾನರ್ ಬೀಳಲು ಗಾಳಿ ಕಾರಣವಾಗಿದ್ದು, ಗಾಳಿಯ ಮೇಲೆ ಪ್ರಕರಣ ದಾಖಲಿಸಿಕೊಳ್ಳಿ ಎಂದು ಪೊನ್ನಯನ್ ಉಡಾಫೆಯ ಮಾತುಗಳನ್ನಾಡಿದ್ದಾರೆ.

ಎಐಎಡಿಎಂಕೆ ನಾಯಕ ಹಾಗೂ ಮಾಜಿ ಕೌನ್ಸಿಲರ್ ಜಯಗೋಪಾಲ್ ತಮ್ಮ ಪುತ್ರನ ಮದುವೆಗಾಗಿ ಅಳವಡಿಸಿದ್ದ ಬ್ಯಾನರ್ ಕುಸಿದು ಬಿದ್ದು ಶುಭಶ್ರೀ ಮೃತಪಟ್ಟಿದ್ದರು. ಅನುಮತಿ ಪಡೆಯದೇ ಬ್ಯಾನರ್ ಹಾಕಿದ ಆರೋಪದ ಮೇಲೆ ಜಯಗೋಪಾಲ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸದ್ಯ ಪೊನ್ನಯನ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ರಾಜಕೀಯವಾಗಿ ಮಾಗಿರುವ ನಾಯಕನಿಂದ ಇಂತಹ ಹೇಳಿಕೆ ಬರಬಾರದಿತ್ತು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.