ಎಐಎಡಿಎಂಕೆ ಅಕ್ರಮ ಬ್ಯಾನರ್‌ಗೆ ಮಹಿಳಾ ಟೆಕ್ಕಿ ಬಲಿ| ಚೆನ್ನೈನಲ್ಲೊಂದು ದಾರುಣ ಘಟನೆ
ಚೆನ್ನೈ[ಸೆ.14]: ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳಾ ಎಂಜಿನಿಯರ್‌ವೊಬ್ಬಳ ಮೇಲೆ ಬ್ಯಾನರ್‌ವೊಂದು ಬಿದ್ದ ಪರಿಣಾಮ ಆಯತಪ್ಪಿ ಬಿದ್ದ ಆಕೆಯ ಮೇಲೆ ಹಿಂಬದಿಯಿಂದ ಬರುತ್ತಿದ್ದ ನೀರಿನ ಟ್ಯಾಂಕರ್‌ವೊಂದು ಹರಿದು ಸಾವನ್ನಪ್ಪಿರುವ ದಾರುಣ ಘಟನೆ ಚೆನ್ನೈನಲ್ಲಿ ಗುರುವಾರ ನಡೆದಿದೆ. ರಸ್ತೆಯಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಬ್ಯಾನರ್‌ನಿಂದ ನಡೆದ ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದುರದೃಷ್ಟಮಹಿಳೆಯನ್ನು ಚೆನ್ನೈನ ಕ್ರೊಮೆಪೇಟ್ ಪ್ರದೇಶದ ನಿವಾಸಿ ಎಸ್. ಶುಭಶ್ರೀ (23) ಎಂದು ಗುರುತಿಸಲಾಗಿದೆ. ಮೊದಲ ಶಿಫ್ಟ್ ಮುಗಿಸಿ ಸ್ಕೂಟರ್‌ನಲ್ಲಿ ಪೆರಂಗುಡಿಯಲ್ಲಿರುವ ಕಚೇರಿಯಿಂದ ಶುಭಶ್ರೀ ಮನೆಗೆ ಮರಳುತ್ತಿದ್ದರು. ಈ ವೇಳೆ ಎಐಎಡಿಎಂಕೆ ಪಕ್ಷದ ಮಖಂಡರೊಬ್ಬರು ಮಗನ ಮದುವೆಯ ನಿಮಿತ್ತ ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್‌ವೊಂದು ಬಿದ್ದು, ಆಯತಪ್ಪಿ ಸ್ಕೂಟರ್‌ನಿಂದ ಕೆಳಕ್ಕೆ ಬಿದ್ದಿದ್ದರು. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ನೀರಿನ ಟ್ಯಾಂಕರ್‌ವೊಂದು ಶುಭಶ್ರೀ ಮೇಲೆ ಹರಿದಿದೆ.
ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಶುಭಶ್ರೀ ಸಾವನ್ನಪ್ಪಿದ್ದಾರೆ. ನಿರ್ಲಕ್ಷ್ಯದಿಂದ ಹಾಗೂ ವೇಗವಾಗಿ ವಾಹನ ಚಲಾಯಿಸಿದ ಕಾರಣಕ್ಕೆ ಟ್ಯಾಂಕರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಬ್ಯಾನರ್ ಅಳವಡಿಸಿದ ಎಐಎಡಿಎಂಕೆ ಮುಖಂಡ ಜೈಕೋಪಾಲ್ ವಿರುದ್ಧ ದೂರು ದಾಖಲಾಗಿದೆ.
ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ಇದೇ ವೇಳೆ ಶುಭಶ್ರೀ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಅಕ್ರಮ ಬ್ಯಾನರ್ ಅಳವಡಿಸುವ ರಾಜಕೀಯ ಪಕ್ಷಗಳು ಹಾಗೂ ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದೆ. ‘ರಸ್ತೆಯನ್ನು ರಕ್ತದಿಂದ ಪೇಂಟ್ ಮಾಡಲು ನಿಮಗೆ ಇನ್ನಷ್ಟು ಎಷ್ಟುಲೀಟರ್ ರಕ್ತ ಬೇಕು?’ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಖಾರವಾಗಿ ಪ್ರಶ್ನಿಸಿದೆ. ಅಲ್ಲದೆ ತಕ್ಷಣವೇ ಶುಭಶ್ರೀ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡುವಂತೆ ಆದೇಶಿಸಿದ್ದು, ಈ ಹಣವನ್ನು ಅಕ್ರಮ ಬ್ಯಾನರ್ ಹಾಕಲು ಕಾರಣರಾದ ಅಧಿಕಾರಿಗಳಿಂದ ವಶಪಡಿಸಿಕೊಳ್ಳುವಂತೆ ಸೂಚಿಸಿದೆ.
