ಬೆಂಗಳೂರು (ಮೇ. 16): ಕಳೆದ ನಾಲ್ಕೈದು ವರ್ಷಗಳಿಂದ ಸತತ ಬರಗಾಲಕ್ಕೆ ಸಿಲುಕಿರುವ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾದರೆ 138.67 ಲಕ್ಷ ಟನ್‌ ಆಹಾರ ಧಾನ್ಯ ಮತ್ತು 14.71 ಲಕ್ಷ ಟನ್‌ ಎಣ್ಣೆಕಾಳು ಉತ್ಪಾದನೆಯಾಗಲಿದೆ ಎಂದು ಕೃಷಿ ಇಲಾಖೆ ಗುರಿ ನಿಗದಿಪಡಿಸಿಕೊಂಡಿದೆ.

2018-19ನೇ ಸಾಲಿನಲ್ಲಿ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆ ಗುರಿ 135 ಲಕ್ಷ ಟನ್‌ ಇತ್ತು. ಆದರೆ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಮಳೆ ಕೊರತೆಯಿಂದ 106.63 ಲಕ್ಷ ಟನ್‌ ಆಹಾರ ಧಾನ್ಯಗಳ ಉತ್ಪಾದನೆ ಮತ್ತು 8.6 ಲಕ್ಷ ಟನ್‌ ಎಣ್ಣೆ ಕಾಳುಗಳ ಉತ್ಪಾದನೆ ಮಾತ್ರ ಆಗಿತ್ತು.

ಈ ಬಾರಿ, ಅಂದರೆ 2019-20ನೇ ಸಾಲಿನಲ್ಲಿ ಸಮರ್ಪಕ ಮಳೆಯಾಗಲಿದೆ ಎಂಬ ನಿರೀಕ್ಷೆಯಿದ್ದು, ಸುಮಾರು 153.38 ಲಕ್ಷ ಟನ್‌ ಆಹಾರ ಧಾನ್ಯ ಮತ್ತು ಎಣ್ಣೆಕಾಳು ಉತ್ಪಾದಿಸುವ ಗುರಿ ಹೊಂದಿರುವುದಾಗಿ ಕೃಷಿ ಇಲಾಖೆ ತಿಳಿಸಿದೆ.

ಆದರೆ, 2019-20ನೇ ಸಾಲಿನಲ್ಲಿ ಪೂರ್ವ ಮುಂಗಾರು ದುರ್ಬಲವಾಗಿದ್ದು, ಮೇ 15ರವರೆಗೆ ಸಾಮಾನ್ಯ ಮಳೆ 73.2 ಮಿ.ಮೀ. ಆಗಬೇಕಿತ್ತು. ಆ ಪೈಕಿ ಕೇವಲ 39.6 ಮಿ.ಮೀ. ಮಾತ್ರ ಮಳೆಯಾಗಿದ್ದು, 46 ಮಿ.ಮೀ.ನಷ್ಟುಕೊರತೆಯಾಗಿದೆ.

ಪ್ರಸ್ತುತ ಕೃಷಿ ಇಲಾಖೆಯ ಮಾಹಿತಿ ಅನ್ವಯ ಪೂರ್ವ ಮುಂಗಾರಿನಲ್ಲಿ 76.69 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಮಳೆ ಕೊರತೆಯಿಂದ 0.30826 (ಶೇ.0.40) ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಮಾತ್ರ ಬಿತ್ತನೆಯಾಗಿದೆ. ಆದರೂ ಉತ್ತಮ ಮುಂಗಾರಿನ ನಿರೀಕ್ಷೆ ಇರುವುದರಿಂದ ಈ ಕೊರತೆ ನೀಗಿ ಆಹಾರ ಧಾನ್ಯ ಉತ್ಪಾದನೆ ಗುರಿಯನ್ನು ಮುಟ್ಟುವ ನಿರೀಕ್ಷೆಯಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಮೂರು ಹಂಗಾಮುಗಳಲ್ಲಿ ಒಟ್ಟಾರೆ 50.35 ಲಕ್ಷ ಹೆಕ್ಟೇರ್‌ ಏಕದಳ ಧಾನ್ಯಗಳ ಬಿತ್ತನೆಯಿಂದ 117.22 ಲಕ್ಷ ಟನ್‌ ಉತ್ಪಾದನೆ, 33.33 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಿಂದ 22.53 ಲಕ್ಷ ಟನ್‌ ದ್ವಿದಳ ಧಾನ್ಯಗಳ ಉತ್ಪಾದನೆ ಮಾಡಿ ಒಟ್ಟು 83.69 ಲಕ್ಷ ಹೆಕ್ಟೇರ್‌ನಲ್ಲಿ 138.67 ಲಕ್ಷ ಟನ್‌ ಆಹಾರ ಧಾನ್ಯಗಳ ಉತ್ಪಾದನೆ ಮಾಡುವ ಗುರಿ ಇದೆ. 16.38 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿ 14.71 ಲಕ್ಷ ಟನ್‌ ಎಣ್ಣೆಕಾಳು ಉತ್ಪಾದಿಸಲಾಗುವುದು.

ಇನ್ನು 6.67 ಲಕ್ಷ ಹೆಕ್ಟರ್‌ನಲ್ಲಿ 16.5 ಲಕ್ಷ ಬೇಲ್‌ ಹತ್ತಿ, 4.04 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿ 400 ಲಕ್ಷ ಟನ್‌ ಕಬ್ಬು, 76 ಸಾವಿರ ಹೆಕ್ಟೇರ್‌ನಲ್ಲಿ ತಂಬಾಕು-ವಿಎಫ್‌ಸಿ ಬಿತ್ತನೆಯಿಂದ 0.62 ಲಕ್ಷ ಟನ್‌ ಉತ್ಪಾದನೆ ಮಾಡುವ ಗುರಿ ಹೊಂದಿರುವುದಾಗಿ ಎಂದು ಕೃಷಿ ಇಲಾಖೆ ಹೇಳಿದೆ.

ಕೆಲ ಜಿಲ್ಲೆಗಳಲ್ಲಿ ಬಿತ್ತನೆ ಪ್ರಾರಂಭ:

ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಸುರಿದಿದ್ದು, ಈಗಾಗಲೇ ರೈತರು ಭೂ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕೆಲವು ಭಾಗಗಳಲ್ಲಿ ಅಲಸಂದೆ, ಸೂರ್ಯಕಾಂತಿ, ಹತ್ತಿ, ಜೋಳ, ಹೆಸರು, ತಂಬಾಕು, ಉದ್ದು, ಎಳ್ಳು ಸೇರಿದಂತೆ ಇತರ ಬೆಳೆಗಳ ಬಿತ್ತನೆ ಶುರು ಮಾಡಿದ್ದಾರೆ. ಜೂನ್‌ ಮೊದಲ ವಾರದಲ್ಲಿ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಬಹುತೇಕ ಪ್ರದೇಶಗಲ್ಲಿ ಮುಂಗಾರು ಪ್ರವೇಶಿಸಲಿದ್ದು, ನಂತರ ಭೂಮಿ ಸಿದ್ಧತೆ ಮತ್ತು ಬಿತ್ತನೆ ಕಾರ್ಯಗಳು ಪ್ರಾರಂಭವಾಗಲಿವೆ.

ರಸಗೊಬ್ಬರ ದಾಸ್ತಾನು:

2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 22.75 ಲಕ್ಷ ಮೆಟ್ರಿಕ್‌ ಟನ್‌ ವಿವಿಧ ರಸಾಯನಿಕ ರಸಗೊಬ್ಬರಗಳ ಬೇಡಿಕೆ ಅಂದಾಜಿಸಲಾಗಿದೆ. ಸಕಾಲದಲ್ಲಿ ರಸಗೊಬ್ಬರ ಪೂರೈಕೆಗೆ ಕ್ರಮಕೈಗೊಳ್ಳಲಾಗಿದ್ದು, ಪೂರ್ವ ಮುಂಗಾರು ಹಂಗಾಮಿನಲ್ಲಿ ಮೇ 15ರವರೆಗೆ 2.81 ಲಕ್ಷ ಮೆಟ್ರಿಕ್‌ ಟನ್‌ ವಿವಿಧ ರಸಗೊಬ್ಬರ ಸರಬರಾಜು ಮಾಡಲಾಗಿದೆ. ಪ್ರಸ್ತುತ 6.96 ಲಕ್ಷ ಟನ್‌ ದಾಸಾನು ಇದೆ. ರೈತರಿಗೆ ಕೃಷಿ ಸಾಮಗ್ರಿಗಳಾದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸರಬರಾಜು ಮಾಡಲು ಕ್ರಮ ಕೈಗೊಂಡಿರುವುದಾಗಿ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- ಸಂಪತ್ ತರಿಕೆರೆ