ಬೆಂಗಳೂರು [ಜೂ.27] :  ಕಳಪೆ ಗುಣಮಟ್ಟದ ಕಾರಣದಿಂದ ವಿದ್ಯಾರ್ಥಿಗಳಿಗೆ ಸೈಕಲ್‌ ನೀಡುವುದನ್ನು ಸ್ಥಗಿತಗೊಳಿಸಲಾಗಿದ್ದು, ಪುನಃ ಸೈಕಲ್‌ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೈಕಲ್‌ ನೀಡಿಕೆ ಸಂಬಂಧ ಗುರುವಾರ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ನಂತರ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ನೀಡಿದ ವರದಿಯಂತೆ ಪಠ್ಯಕ್ರಮ ಬದಲಾವಣೆ ಮಾಡಲಾಗಿದೆ. ಈಗ ಮತ್ತೆ ಅಗತ್ಯವಿದ್ದರೆ ಪಠ್ಯಕ್ರಮ ಬದಲಿಸಲಾಗುವುದು. ಪಠ್ಯಕ್ರಮದಲ್ಲಿ ಪ್ರಾದೇಶಿಕತೆ ಅಂಶ ಇರುವ ರೀತಿಯಲ್ಲಿ ಬದಲಾವಣೆ ಹೇಗೆ ಮಾಡಬೇಕೆಂಬ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.

ಸಚಿವರ ನೇತೃತ್ವದಲ್ಲಿ ಅಧ್ಯಯನ ಪ್ರವಾಸ:

ಶಿಕ್ಷಣದ ಗುಣಮಟ್ಟಹೆಚ್ಚಿಸುವ ಸಂಬಂಧ ಅಧ್ಯಯನ ಮಾಡಲು ಕೇರಳ ಮತ್ತು ದೆಹಲಿಗೆ ನನ್ನ ನೇತೃತ್ವದಲ್ಲಿ ನಿಯೋಗ ತೆರಳಿ ಅಧ್ಯಯನ ಮಾಡಲು ಉದ್ದೇಶಿಸಲಾಗಿದೆ. ಎರಡು ವಾರಗಳಲ್ಲಿ ಸಮಯ ನಿಗದಿ ಮಾಡಿ ಪ್ರವಾಸ ಮಾಡಲಾಗುವುದು ಎಂದು ಸಚಿವ ಶ್ರೀನಿವಾಸ್‌ ತಿಳಿಸಿದರು.

ವಿದ್ಯಾರ್ಥಿಗಳ ಕೊರತೆಯಿಂದಾಗಿ ಪ್ರತಿ ತಾಲೂಕಿನಲ್ಲಿ 20-30 ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಖಾಸಗಿ ಶಾಲೆಗಳು ಹಳ್ಳಿಗಳಿಗೂ ಸಹ ವಾಹನ ಕಳಿಸಿ ಮಕ್ಕಳನ್ನು ಕರೆದುಕೊಂಡು ಬರುತ್ತಿವೆ. ಶಿಕ್ಷಣ ವ್ಯಾಪಾರೀಕರಣ ಆಗುತ್ತಿದೆ. ಜನರು ಸಹ ಇಂತಹ ಶಾಲೆಗಳ ಬಗ್ಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ವರ್ಷ ಶಾಲಾ ಕಟ್ಟಡ, ಶೌಚಾಲಯ ಇತ್ಯಾದಿ ಸೌಲಭ್ಯ ಕಲ್ಪಿಸಲು 1,200 ಕೋಟಿ ರು. ನೀಡಿದೆ. ಖಾಸಗಿ ಶಾಲೆಗಳಿಗೆ ಕರ್ನಾಟಕ ಪಬ್ಲಿಕ್‌ ಶಾಲೆ ಸೂಕ್ತ ಪರ್ಯಾಯವಾಗಿದೆ. ಇಂತಹ ಶಾಲೆಗಳ ಸಂಖ್ಯೆಯನ್ನು ಇನ್ನಷ್ಟುಹೆಚ್ಚು ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ವಿವರಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಗ್ರಂಥಪಾಲಕರು ತಮ್ಮ ಸೇವೆ ಕಾಯಂ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಕೆಲವು ಗ್ರಂಥಾಲಯಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಗೆ ಬರುತ್ತದೆ. ತಮ್ಮನ್ನು ನಿನ್ನೆ ಭೇಟಿ ಮಾಡಿದ ಸಂದರ್ಭದಲ್ಲಿ ಇಲಾಖೆ ಜೊತೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿರುವುದಾಗಿ ಸಚಿವ ಶ್ರೀನಿವಾಸ್‌ ಹೇಳಿದರು.