Asianet Suvarna News Asianet Suvarna News

ರಾಜಕೀಯ ದೊಂಬರಾಟದ ನಡುವೆ ಸಚಿವ ಡಿಕೆಶಿಗೆ ತೀವ್ರ ಸಂಕಷ್ಟ

ರಾಜ್ಯ ರಾಜಕಾರಣದ ದೊಂಬರಾಟದ ನಡುವೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಇದೀಗ ತೀವ್ರ ಸಂಕಷ್ಟ ಎದುರಾಗಿದೆ. 

Again IT Problem For Minister DK Shivakumar
Author
Bengaluru, First Published Jun 29, 2019, 7:38 AM IST

ಬೆಂಗಳೂರು [ಜೂ.29] :  ಕಳೆದ 2017ರಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ದಾಳಿ ವೇಳೆ ದೆಹಲಿಯ ಫ್ಲ್ಯಾಟ್‌ನಲ್ಲಿ 8.6 ಕೋಟಿ ರು. ಹಣ ಪತ್ತೆ ಪ್ರಕರಣದ ಸಂಬಂಧ ತಮ್ಮನ್ನು ಐಟಿ ಇಲಾಖೆ ತನಿಖೆಯಿಂದ ಮುಕ್ತಗೊಳಿಸುವಂತೆ ಕೋರಿ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.

ಇದರೊಂದಿಗೆ ಸಚಿವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಅವರ ವಿರುದ್ಧ ಆದಾಯ ತೆರಿಗೆ ಇಲಾಖೆಯ ತನಿಖೆ ವೇಗ ಪಡೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

‘ನನ್ನ ವಿರುದ್ಧ ಐಟಿ ಅಧಿಕಾರಿಗಳು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ನಾನು ಯಾವುದೇ ರೀತಿ ಕಾನೂನುಬಾಹಿರವಾಗಿ ಹಣಕಾಸು ವ್ಯವಹಾರ ನಡೆಸಿಲ್ಲ’ ಎಂದು ನ್ಯಾಯಾಲಯಕ್ಕೆ ಬಿನ್ನವಿಸಿಕೊಂಡು ತನಿಖೆಯಿಂದ ಹೆಸರು ಕೈಬಿಡುವಂತೆ ಸಚಿವರು ಕೋರಿದ್ದರು. ಆದರೆ ಸಚಿವರ ಮನವಿಗೆ ಐಟಿ ಪರ ವಕೀಲರು ತೀವ್ರ ಆಕ್ಷೇಪಣೆ ಸಲ್ಲಿಸಿದ್ದರು.

ಈ ಪ್ರಕರಣದ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ಹಣ ಪತ್ತೆ ಕುರಿತು ತನಿಖೆ ನಡೆದಿದೆ. ಹೀಗಾಗಿ ಈ ಹಂತದಲ್ಲಿ ಶಿವಕುಮಾರ್‌ ಮತ್ತು ಇತರರನ್ನು ಅವರು ಆರೋಪಿಗಳಲ್ಲ ಎಂದು ಪರಿಗಣಿಸಿ ಪ್ರಕರಣದಿಂದ ಕೈ ಬಿಡುವುದು ಸರಿಯಲ್ಲ. ಆರೋಪದ ಬಗ್ಗೆ ತನಿಖೆ ನಡೆದ ಮೇಲೆ ಸತ್ಯ ಗೊತ್ತಾಗಲಿದೆ ಎಂದು ಹೇಳಿ ಅರ್ಜಿ ವಜಾಗೊಳಿಸಿದರು.

ಇನ್ನು ಅಂತಿಮ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಬಂದು ಸಿಹಿ ಸುದ್ದಿ ನಿರೀಕ್ಷೆಯಲ್ಲಿದ್ದ ಸಚಿವರು, ಸಂಜೆ ತೀರ್ಪು ಹೊರಬೀಳುತ್ತಿದ್ದಂತೆ ಗಂಭೀರ ವದನರಾಗಿ ನ್ಯಾಯಾಲಯದಿಂದ ಹೊರನಡೆದರು. ಈ ಪ್ರಕರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌, ಅವರ ಆಪ್ತ ಸಹಾಯಕ ಎನ್‌.ರಾಜೇಂದ್ರ, ಆಂಜನೇಯ, ಸಚಿನ್‌ ನಾರಾಯಣ್‌, ಸುನೀಲ್‌ ಕುಮಾರ್‌ ಶರ್ಮ, ಎನ್‌.ರಾಜೇಂದ್ರ ಹಾಗೂ ಹನುಮಂತಯ್ಯ ಆರೋಪಿಗಳಾಗಿದ್ದಾರೆ. ಜು.3ರಿಂದ ಆರೋಪಿಗಳ ವಿರುದ್ಧ ನ್ಯಾಯಾಲಯ ವಿಚಾರಣೆ ಮುಂದುವರೆಸಲಿದೆ.

ನ್ಯಾಯಾಲಯ ಹೇಳಿದ್ದೇನು?

ಫ್ಲ್ಯಾಟ್‌ನಲ್ಲಿ ಜಪ್ತಿಯಾದ ಹಣವು ಶಿವಕುಮಾರ್‌ ಅವರಿಗೆ ಸೇರಿದ್ದಾಗಿದೆ ಎಂದು ಐಟಿ ಅಧಿಕಾರಿಗಳ ಮುಂದೆ ಶಿವಕುಮಾರ್‌ ಹೊರತುಪಡಿಸಿ ಇನ್ನುಳಿದ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಈ ಮೂಲಕ ಆರೋಪಿಗಳೇ ಆರೋಪದ ಕುರಿತು ಸಾಕ್ಷ್ಯ ನುಡಿದಂತಾಗಿದೆ. ಅಲ್ಲದೆ, ಕಪ್ಪು ಹಣ ಪತ್ತೆ ಮಾಡುವಾಗ ಕಾನೂನು ಅನುಸಾರ ಕೈಗೊಳ್ಳಬೇಕಾದ ಕ್ರಮಗಳನ್ನೇ ಈ ಪ್ರಕರಣದಲ್ಲೂ ಸಹ ತನಿಖಾಧಿಕಾರಿಗಳು ಕೈಗೊಂಡಿದ್ದಾರೆ ಎಂದು ಐಟಿ ಪರ ವಕೀಲರ ವಾದವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಒಪ್ಪಿದೆ.

ಏನಿದು ಪ್ರಕರಣ?

2017ರಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸೇರಿದ ಬೆಂಗಳೂರು ಮತ್ತು ದೆಹಲಿ ಸೇರಿದಂತೆ ವಿವಿಧ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಅಂದು ಸಚಿವರಿಗೆ ಸೇರಿದ ನವದೆಹಲಿಯ ಸಪ್ಧರ್‌ಜಂಗ್‌ ಎನ್‌ಕ್ಲೇವ್‌ ಫ್ಲ್ಯಾಟ್‌ನಲ್ಲಿ 8.60 ಕೋಟಿ ರು. ನಗದು ಸಿಕ್ಕಿತ್ತು. ಆದರೆ ಈ ಹಣಕ್ಕೆ ಸೂಕ್ತವಾದ ದಾಖಲೆಗಳನ್ನು ನೀಡುವಲ್ಲಿ ಆರೋಪಿಗಳು ವಿಫಲರಾಗಿದ್ದರು. ಇದರಿಂದ ಆರೋಪಿಗಳು ಆದಾಯ ತೆರಿಗೆ ಕಾಯ್ದೆ ಮತ್ತು ಐಪಿಸಿ ಕಲಂ 120 ಬಿ (ಅಪರಾಧಿಕ ಸಂಚು) ಅನುಸಾರ ಅಪರಾಧ ಎಸಗಿದ್ದಾರೆ ಎಂದು ಐಟಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ವಾದ ಮಂಡಿಸಿದ್ದರು.

ಈ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಸಚಿವರ ಅರ್ಜಿ ವಜಾಗೊಳಿಸಿದೆ. ಈ ಪ್ರಕರಣ ಸಂಬಂಧ ಸಚಿವರ ವಿರುದ್ಧ ದೋಷಾರೋಪಣೆ ಪ್ರಕ್ರಿಯೆಯನ್ನು ಜು.3ರಿಂದ ನ್ಯಾಯಾಲಯವು ಕೈಗೆತ್ತಿಗೊಳ್ಳಲಿದೆ.

Follow Us:
Download App:
  • android
  • ios