ನವದೆಹಲಿ (ಮೇ. 14):  ಹಿಂಗಾರು ಮಳೆ ವೈಫಲ್ಯದಿಂದ ಭೀಕರ ಬರಗಾಲ ಎದುರಿಸುತ್ತಿರುವ ಕರ್ನಾಟಕವು ಬರ ಪರಿಹಾರ ಪ್ಯಾಕೇಜ್‌ಗೆ ಇನ್ನೂ ಕೆಲವು ವಾರಗಳ ಕಾಲ ಕಾಯುವುದು ಅನಿವಾರ್ಯ. ಏಕೆಂದರೆ, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಅಸ್ತಿತ್ವಕ್ಕೆ ಬರುವ ಹೊಸ ಸರ್ಕಾರವೇ ಈ ಕುರಿತು ನಿರ್ಧಾರ ಕೈಗೊಳ್ಳಬೇಕಾಗಿದೆ.

ಬರದಿಂದಾಗಿ ಆಗಿರುವ ಹಾನಿಯ ಕುರಿತು ಈಗಾಗಲೇ ಕೇಂದ್ರ ತಂಡ ಕರ್ನಾಟಕಕ್ಕೆ ಭೇಟಿ ನೀಡಿ ವಿವರವಾದ ವರದಿಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ಸಲ್ಲಿಕೆ ಮಾಡಿದೆ. ಹಿಂಗಾರು ಹಂಗಾಮಿನಲ್ಲಿ ಬೆಳೆ ನಷ್ಟಅನುಭವಿಸಿರುವ ರೈತರಿಗೆ ಪರಿಹಾರ ನೀಡಲು 2064 ಕೋಟಿ ರು. ನೆರವು ನೀಡುವಂತೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮನವಿಯನ್ನೂ ಸಲ್ಲಿಸಿದೆ.

ಕೇಂದ್ರ ತಂಡದ ವರದಿಯನ್ನು ಇಟ್ಟುಕೊಂಡು, ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಬರುವ ಉನ್ನತ ಸಮಿತಿ ಬರ ಪರಿಹಾರ ಪ್ಯಾಕೇಜ್‌ ಕುರಿತು ನಿರ್ಧಾರ ಕೈಗೊಳ್ಳಬೇಕು. ಆದರೆ ಸರ್ಕಾರ ಆ ನಿಟ್ಟಿನಲ್ಲಿ ಮುಂದುವರಿಯುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಬರಕ್ಕೆ ಸಂಬಂಧಿಸಿದಂತೆ ಉನ್ನತ ಸಮಿತಿಯ ಸಭೆ ನಡೆಸಲು ಚುನಾವಣಾ ನೀತಿ ಸಂಹಿತೆ ಕೇಂದ್ರ ಸರ್ಕಾರಕ್ಕೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ. ಆದರೆ ಹೊಸದಾಗಿ ಅಧಿಕಾರಕ್ಕೆ ಬರುವ ಸರ್ಕಾರವೇ ಆ ಕುರಿತು ನಿರ್ಧಾರ ಕೈಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ ಎಂದು ಮೂಲಗಳು ವಿವರಿಸಿವೆ.

30 ಜಿಲ್ಲೆಗಳ 156 ತಾಲೂಕುಗಳಲ್ಲಿ ಬರ ಇದೆ. ಆ ಪೈಕಿ 107 ತಾಲೂಕುಗಳಲ್ಲಿ ಪರಿಸ್ಥಿತಿ ಭೀಕರವಾಗಿದೆ. 49 ತಾಲೂಕುಗಳು ಸಾಧಾರಣ ಬರ ಇದೆ ಎಂದು ಕರ್ನಾಟಕ ಘೋಷಿಸಿದೆ. ಬರದಿಂದಾಗಿ 20.40 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಗೆ ತೊಂದರೆಯಾಗಿದೆ. 19.46 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಬರ ಪರಿಹಾರ ಪ್ಯಾಕೇಜ್‌ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಕಳೆದ ವಾರ ನಡೆದ ಕರ್ನಾಟಕ ಸಚಿವ ಸಂಪುಟ ಸಭೆ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.