ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸಿರುವುದು ಇದೀಗ ಪಾಕಿಸ್ತಾನ ಕಣ್ಣು ಕೆಂಚಗಾಗುವಂತೆ ಮಾಡಿದೆ. ಯುದ್ಧದ ಎಚ್ಚರಿಕೆಯನ್ನು ಪಾಕಿಸ್ತಾನ ರವಾನಿಸಿದ್ದು, ಇದರ ಜೊತೆಗೆ ಭಾರತಕ್ಕೆ ಉಗ್ರ ದಾಳಿಯ ಬಗ್ಗೆಯೂ ಅಲರ್ಟ್ ಮಾಡಲಾಗಿದೆ. 

ನವದೆಹಲಿ [ಆ.09]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದಿಂದ ಪಾಕಿಸ್ತಾನ ಹಾಗೂ ಅಲ್ಲಿರುವ ಭಯೋತ್ಪಾದಕ ಸಂಘಟನೆಗಳು ಕೊತಕೊತ ಕುದಿಯುತ್ತಿವೆ. ಭಾರತದ ನಿರ್ಧಾರಕ್ಕೆ ತಕ್ಕ ಪಾಠ ಕಲಿಸಲು ತುದಿಗಾಲಿನಲ್ಲಿ ನಿಂತಿದ್ದು, ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳಲ್ಲಿ ಪುಲ್ವಾಮಾ ರೀತಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿವೆ ಎಂಬ ಆತಂಕಕಾರಿ ಮಾಹಿತಿ ಗುಪ್ತಚರ ದಳಕ್ಕೆ ಲಭಿಸಿದೆ. ಇದರ ಬೆನ್ನಲ್ಲೇ ದೇಶದ ಹಲವು ರಾಜ್ಯಗಳಲ್ಲಿ ಹೈ ಅಲರ್ಟ್‌ ಸಾರಲಾಗಿದೆ.

370ನೇ ವಿಧಿ ರದ್ದು ನಿರ್ಧಾರದಿಂದ ಮತ್ತಷ್ಟುಪುಲ್ವಾಮಾ ಮಾದರಿ ದಾಳಿಗಳು ನಡೆಯಬಹುದು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು. ಅದಾದ ಬೆನ್ನಲ್ಲೇ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ದಾಳಿಗೆ ಸಜ್ಜಾಗಿದ್ದು, ಅದಕ್ಕೆ ಪಾಕಿಸ್ತಾನ ಸೇನೆಯ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಸಂಪೂರ್ಣ ನೆರವು ನೀಡುತ್ತಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ ಎಂದು ಮೂಲಗಳು ಹೇಳಿವೆ.

ಕರ್ನಾಟಕ, ಕಾಶ್ಮೀರ, ದೆಹಲಿ, ರಾಜಸ್ಥಾನ, ಪಂಜಾಬ್‌, ಗುಜರಾತ್‌, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಪುಲ್ವಾಮಾ ರೀತಿ ದಾಳಿ ನಡೆಸಬಹುದು ಎನ್ನಲಾಗುತ್ತಿದೆ. ಸೇನೆ, ಪೊಲೀಸ್‌ ಹಾಗೂ ಇನ್ನಿತರೆ ಕಾನೂನು ಜಾರಿ ಸಂಸ್ಥೆಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ಆಗಬಹುದು ಎಂದು ಮೂಲಗಳು ವಿವರಿಸಿವೆ.

ಪಾಕ್‌ ಸಚಿವನಿಂದ ಬಂತು ಯುದ್ಧ ಎಚ್ಚರಿಕೆ!

ಏತನ್ಮಧ್ಯೆ ಪುಲ್ವಾಮಾ ದಾಳಿ ಕುರಿತ ಇಮ್ರಾನ್‌ ಹೇಳಿಕೆ ಬೆನ್ನಲ್ಲೇ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ ಸೋದರ ರೌಫ್‌ ಅಜ್ಗರ್‌ ರಾವಲ್ಪಿಂಡಿ ನಗರದಿಂದ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಸ್ಥಳಾಂತರಗೊಂಡಿದ್ದಾನೆ. ಭಾರತದ ಮೇಲೆ ದಾಳಿ ನಡೆಸುವ ಸಲುವಾಗಿ ಜೈಷ್‌ ಉಗ್ರ ಸಂಘಟನೆಯ ಪಂಜಾಬ್‌ ಶಿಬಿರದಿಂದ ಗಡಿಯತ್ತ ಭಾರಿ ಸಂಖ್ಯೆಯ ಉಗ್ರರು ಆಗಮಿಸುತ್ತಿದ್ದಾರೆ ಎನ್ನಲಾಗಿದೆ.

ಮತ್ತೆ ಮುಂಬೈಗೆ ಲಗ್ಗೆ:  ಪುಲ್ವಾಮಾ ಮಾದರಿ ದಾಳಿ ಜತೆಗೆ ದೇಶದ ಮೂಲಸೌಕರ್ಯ ಹಾಗೂ ಆರ್ಥಿಕತೆಗೂ ಹೊಡೆತ ನೀಡುವ ಉದ್ದೇಶವನ್ನು ಉಗ್ರರು ಹೊಂದಿದ್ದಾರೆ. ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಆ ಲಿಸ್ಟ್‌ನಲ್ಲಿ ಮುಂಬೈ ಕೂಡ ಒಂದು ಗುರಿಯಾಗಿದೆ. ಈಗಾಗಲೇ ಮೂವರು ಜೈಷ್‌ ಉಗ್ರರಿಗೆ ಮುಂಬೈನಲ್ಲಿ ದಾಳಿ ನಡೆಸುವ ಹೊಣೆಗಾರಿಕೆ ವಹಿಸಲಾಗಿದೆ. ಸ್ಥಳೀಯ ಸ್ಲೀಪರ್‌ ಸೆಲ್‌ಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಗುಪ್ತಚರ ವರದಿಗಳನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ.