ಇಸ್ಲ​ಮಾಬಾದ್‌ [ಆ.09] : 370ನೇ ವಿಧಿ ರದ್ದು​ಗೊ​ಳಿಸಿದ ಭಾರ​ತ ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ಪಾಕಿಸ್ತಾನ ಇದೀಗ ಯುದ್ಧದ ಮಾತುಗಳನ್ನು ಆಡಿದೆ. ಎರಡೂ ದೇಶಗಳ ನಡುವೆ ಯುದ್ಧ ಆದರೂ ಆಗಬಹುದು ಎಂದು ಪಾಕಿಸ್ತಾನದ ರೈಲ್ವೆ ಖಾತೆ ಸಚಿವ ಶೇಖ್‌ ರಷೀದ್‌ ಅಹಮದ್‌ ಎಚ್ಚರಿಕೆ ನೀಡಿದ್ದಾರೆ.

ಭಾರತಕ್ಕೆ ಸಂಚರಿಸುವ ಸಂಝೋತಾ ಎಕ್ಸ್‌ಪ್ರೆಸ್‌ ರೈಲು ಸಂಚಾರ ಸ್ಥಗಿತಗೊಳಿಸಿದ ಬಗ್ಗೆ ಮಾತನಾಡಿದ ರಶೀದ್‌, ‘ಮುಂದಿನ ಮೂರು ತಿಂಗಳ ಸಮಯ ಬಹಳ ಮಹತ್ವದ್ದು. ಎರಡೂ ದೇಶಗಳ ನಡುವೆ ಯುದ್ಧ ಸಂಭವಿಸಿದರೂ ಸಂಭವಿಸಬಹುದು. ಆದರೆ ನಮಗೆ ಯುದ್ಧ ಬೇಕಿಲ್ಲ. ಒಂದು ವೇಳೆ ನಮ್ಮ ಮೇಲೇನಾದರೂ ಯುದ್ಧ ಸಾರಿದರೆ, ಅದು ಕಡೆಯ ಯುದ್ಧವಾಗಿರಲಿದೆ’ ಎಂದು ಯುದ್ಧೋನ್ಮಾದದಲ್ಲಿ ಮಾತನಾಡಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370, 35ಎ ವಿಧಿ ರದ್ದು, ಕಾಶ್ಮೀರವನ್ನು ಎರಡು ಭಾಗ ಮಾಡಿ ಅವುಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ್ದ ಭಾರತ ಸರ್ಕಾರದ ನಿರ್ಧಾರದ ಬಗ್ಗೆ ಎರಡು ದಿನಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಕೂಡಾ ಟೀಕೆ ಮಾಡಿದ್ದರು.

ಭಾರ​ತದ ಈ ನಡೆ​ಯಿಂದಾಗಿ ಯುದ್ಧ ವಾತಾ​ವ​ರ​ಣ ಸೃಷ್ಟಿಯಾಗಿದ್ದು, ಇದ​ರಿಂದ ಪುಲ್ವಾಮ ಮಾದ​ರಿ ದಾಳಿ ಸಂಭ​ವಿ​ಸಿ​ದ್ರೂ ಅಚ್ಚ​ರಿ​ಯಿಲ್ಲ. ಇದಕ್ಕೆ ನಮ್ಮನ್ನು ದೂರ​ಬಾ​ರ​ದು. ಎರಡು ಅಣ್ವಸ್ತ್ರ ರಾಷ್ಟ್ರ​ಗಳ ನಡು​ವಿನ ತಿಕ್ಕಾಟದಿಂದ ಕೇವಲ ಭಾರತ- ಪಾಕ್‌ ಮಾತ್ರ​ವಲ್ಲ, ಇಡೀ ಜಗತ್ತು ಇದ​ರಿಂದ ತೊಂದರೆ ಅನು​ಭ​ವಿ​ಸು​ತ್ತದೆ. ಇದು ನಮ್ಮ ಅಣ್ವ​ಸ್ತ್ರ ಬೆದ​ರಿ​ಕೆ​ಯಲ್ಲ. ನಮ್ಮ ಮೇಲೆ ದಾಳಿ ಮಾಡಿ​ದರೆ ನಾವು ಪ್ರತಿ​ದಾಳಿ ಮಾಡು​ತ್ತೇವೆ. ಇದ​ರಿಂದ ಯುದ್ಧ ಸನ್ನಿ​ವೇಶ ಸೃಷ್ಟಿ​ಯಾ​ಗು​ತ್ತದೆ. ಯುದ್ಧ​ದಲ್ಲಿ ಯಾರೂ ಗೆಲ್ಲು​ವು​ದಿಲ್ಲ. ಯುದ್ಧ ನಡೆ​ದರೆ ಇಡೀ ಪ್ರಪಂಚಕ್ಕೆ ತೊಂದ​ರೆ​ಯಾ​ಗು​ತ್ತದೆ ಎಂದು ಪರೋ​ಕ್ಷ​ವಾಗಿ ಯುದ್ಧದ ಮುನ್ಸೂ​ಚ​ನೆ ನೀಡಿ​ದ್ದರು.

ಇನ್ನು ಪಾಕಿಸ್ತಾನ ಸೇನೆ ಕೂಡಾ ಕಾಶ್ಮೀರ ಮತ್ತು ಅಲ್ಲಿನ ಜನರಿಗಾಗಿ ನಮ್ಮ ಸೇನೆ ಏನು ಬೇಕಾದರೂ ಮಾಡಲು ಸಿದ್ಧವಾಗಿದೆ ಎಂದು ಗುಡುಗಿತ್ತು. ದಶಕಗಳಿಂದಲೂ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತ್ಯೇಕತಾವಾದವನ್ನು ದಮನ ಮಾಡಲು ಭಾರತ ಸರ್ಕಾರ ಈ ತಂತ್ರ ಅನುಸರಿಸಿದೆ. ಆದರೆ, ಇಲ್ಲಿನ ಕಾಶ್ಮೀರಿಗರಿಗೆ ಸಹಾಯ ಮಾಡಲು ಪಾಕ್‌ ಸೇನೆ ಸದಾ ಸಿದ್ಧವಾಗಿದೆ. ಅಲ್ಲಿನ ಜನರ ಹಿತರಕ್ಷಣೆಗಾಗಿ ಯಾವ ಬೆಲೆ ತೆರಲೂ ಸೇನೆ ಸನ್ನದ್ಧವಾಗಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಇಲ್ಲಿ ಮಂಗಳವಾರ ಸೈನಿಕರ ಸಮ್ಮೇಳನದಲ್ಲಿ ಹೇಳಿದ್ದರು.