ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವ ಸಂಬಂಧ ರಾಜ್ಯಪಾಲರು ಈಗಾಗಲೇ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ, ಮಾಜಿ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ಹಾಗೂ ಸಾಂವಿಧಾನಿಕ ತಜ್ಞ ಸೋಲಿ ಸೊರಾಬ್ಜಿ ಅವರಿಂದ ಸಲಹೆ ಪಡೆದಿದ್ದಾರೆ. ಈ ಪೈಕಿ ಇಬ್ಬರು 1998ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ರಹಸ್ಯ ಮತದಾನದಂತಹ ಮಿಶ್ರ ಬಹುಮತ ಸಾಬೀತಿಗೆ ಅವಕಾಶ ಕೊಡಬೇಕು ಎಂದು ಸಲಹೆ ಮಾಡಿದ್ದಾರೆ.

ನವದೆಹಲಿ(ಫೆ.14): ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಒ. ಪನ್ನೀರ್‌ಸೆಲ್ವಂ ಪೈಕಿ ಬಹುಮತ ಯಾರಿಗಿದೆ ಎಂಬುದನ್ನು ನಿರ್ಧರಿಸಲು ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್ ಅವರು ವಿಧಾನಸಭೆಯಲ್ಲಿ ‘ರಹಸ್ಯ ಮತದಾನ’ (ಸೀಕ್ರೆಟ್ ಬ್ಯಾಲಟ್) ಎಂಬ ಅಪರೂಪದ ಪ್ರಕ್ರಿಯೆಗೆ ಮುಂದಾಗುವ ಸಾಧ್ಯತೆ ಇದೆ.

ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವ ಸಂಬಂಧ ರಾಜ್ಯಪಾಲರು ಈಗಾಗಲೇ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ, ಮಾಜಿ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ಹಾಗೂ ಸಾಂವಿಧಾನಿಕ ತಜ್ಞ ಸೋಲಿ ಸೊರಾಬ್ಜಿ ಅವರಿಂದ ಸಲಹೆ ಪಡೆದಿದ್ದಾರೆ. ಈ ಪೈಕಿ ಇಬ್ಬರು 1998ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ರಹಸ್ಯ ಮತದಾನದಂತಹ ಮಿಶ್ರ ಬಹುಮತ ಸಾಬೀತಿಗೆ ಅವಕಾಶ ಕೊಡಬೇಕು ಎಂದು ಸಲಹೆ ಮಾಡಿದ್ದಾರೆ. ಸೋಲಿ ಸೊರಾಬ್ಜಿ ಅವರು ಮಾತ್ರ, ಬಹುಮತ ಸಾಬೀತಿಗೆ ವಿಳಂಬ ಮಾಡಬೇಡಿ. ಒಂದು ವಾರದಲ್ಲಿ ಮಾಡಿ ಮುಗಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಹೊಂದಿರುವ ವ್ಯಕ್ತಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿ ಎಂದು ತಿಳಿಸಿದ್ದಾರೆ.

ಇಬ್ಬರು ವ್ಯಕ್ತಿಗಳು ತಮಗೇ ಬಹುಮತ ಇದೆ ಎಂದು ಹೇಳಿಕೊಳ್ಳುವ ಸಂದರ್ಭಗಳಲ್ಲಿ ರಾಜ್ಯಪಾಲರು ರಹಸ್ಯ ಮತದಾನಕ್ಕೆ ಆದೇಶಿಸಬಹುದಾಗಿದೆ. ಆ ಪ್ರಕ್ರಿಯೆಯಡಿ, ವಿಧಾನಸಭೆಯಲ್ಲಿ ಮತಪೆಟ್ಟಿಗೆಯನ್ನು ಇಟ್ಟು, ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಹಾಕಲು ಶಾಸಕರಿಗೆ ಸೂಚಿಸಲಾಗುತ್ತದೆ. ಅದರಲ್ಲಿ ಯಾರು ವಿಜೇತರಾಗುತ್ತಾರೋ ಅವರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸುತ್ತಾರೆ. ಇದರಿಂದಾಗಿ ಶಾಸಕರು ಯಾವುದೇ ಒತ್ತಡವಿಲ್ಲದೆ ತಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಿದಂತಾಗುತ್ತದೆ.

1998ರಲ್ಲಿ ಜಗದಾಂಬಿಕಾ ಪಾಲ್ ಹಾಗೂ ಕಲ್ಯಾಣಸಿಂಗ್ ಪೈಕಿ ಯಾರು ಉತ್ತರಪ್ರದೇಶ ಮುಖ್ಯಮಂತ್ರಿಯಾಗಬೇಕು ಎಂಬುದನ್ನು ನಿರ್ಧರಿಸಲು ರಹಸ್ಯ ಮತದಾನ ನಡೆಸಲಾಗಿತ್ತು. 2005ರಲ್ಲಿ ಶಿಬು ಸೊರೇನ್ ಹಾಗೂ ಅರ್ಜುನ್ ಮುಂಡಾ ಅವರ ಬಹುಮತ ತೀರ್ಮಾನಿಸಲು ಜಾರ್ಖಂಡ್‌ನಲ್ಲಿ ಇಂತಹುದೇ ಪ್ರಕ್ರಿಯೆ ನಡೆದಿತ್ತು.