ತೇಜಸ್ವಿ ವಿರುದ್ಧದ ಆರೋಪದ ಬಗ್ಗೆ ತೀರ್ಮಾನಕ್ಕೆ ಬನ್ನಿ ಎಂದಿದ್ದೆ. ನನ್ನ ಆತ್ಮಸಾಕ್ಷಿಯ ವಿರುದ್ಧವಾಗಿ ನಾನು ನಡೆಯಲ್ಲ. ನನಗೆ ಈವರೆಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ.
ಪಾಟ್ನಾ(ಜು.26): ಆರ್'ಜೆಡಿ'ಯೊಂದಿಗಿನ ಮನಸ್ತಾಪದಿಂದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಭ್ರಷ್ಟಾಚಾರ ಆರೋಪದಿಂದ ಸಿಬಿಐ ದಾಳಿಗೊಳಗಾಗಿ ಎಫ್'ಐಆರ್ ದಾಖಲಿಸಿದರೂ ರಾಜೀನಾಮೆ ನೀಡದ ಮೈತ್ರಿ ಪಕ್ಷದ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಕಾರಣದಿಂದ ಸ್ವತಃ ಮುಖ್ಯಮಂತ್ರಿ ಅವರೇ ರಾಜೀನಾಮೆ ನೀಡಿದ್ದಾರೆ.
ಬಿಹಾರದ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ : ನಿತೀಶ್
'ಸರ್ಕಾರದಿಂದ ರಾಜ್ಯದ ಹಿತಕ್ಕಾಗಿ ಕೆಲಸ ಮಾಡಿದ್ದೇನೆ. ಮಹಾಮೈತ್ರಿ ಮುಂದುವರೆಸುವ ಸಾಧ್ಯತೆಗಳು ಇರಲಿಲ್ಲ. 20 ತಿಂಗಳ ಆಡಳಿತದಲ್ಲಿ ಸರ್ಕಾರದ ಮೇಲೆ ಯಾವುದೇ ಆರೋಪಗಳಿಲ್ಲ.ಆದರೆ ಕಳೆದ ಕೆಲ ದಿನಗಳಿಂದ ಪರಿಸ್ಥಿತಿ ಭಿನ್ನವಾಗಿತ್ತು. ಬಿಹಾರದ ಹಿತದೃಷ್ಟಿಯಿಂದ ಮುಂದೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ರಾಜ್ಯಪಾಲರು ನನ್ನ ರಾಜೀನಾಮೆ ಅಂಗೀಕರಿಸಿದ್ದಾರೆ. ಮುಂದೆ ಏನಾಗುತ್ತೆ ಎಂಬುವುದನ್ನ ಕಾದುನೋಡಿ.
ರಾಜ್ಯದ ಅಭಿವೃದ್ಧಿ ನನ್ನ ಆದ್ಯತೆಯಾಗಿತ್ತು, ಆಗಿರುತ್ತದೆ. ಬಿಹಾರದ ಜನತೆಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಬಿಟ್ಟು ಬೇರೆ ಆಯ್ಕೆಗಳು ನನ್ನಲ್ಲಿ ಇರಲಿಲ್ಲ. ನನಗೆ ಯಾವುದೇ ಅಜೆಂಡಾ ಇಲ್ಲ. ತೇಜಸ್ವಿ ವಿರುದ್ಧದ ಆರೋಪದ ಬಗ್ಗೆ ತೀರ್ಮಾನಕ್ಕೆ ಬನ್ನಿ ಎಂದಿದ್ದೆ. ನನ್ನ ಆತ್ಮಸಾಕ್ಷಿಯ ವಿರುದ್ಧವಾಗಿ ನಾನು ನಡೆಯಲ್ಲ. ನನಗೆ ಈವರೆಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ.
ಗಲ್ಲುಶಿಕ್ಷೆ ಆಗಬಹುದು : ಲಾಲು
ನಿತೀಶ್ ಕುಮಾರ್ ವಿರುದ್ಧ 1991ರಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಕೊಲೆ ಆರೋಪ ಭ್ರಷ್ಟಾಚಾರ ಆರೋಪಕ್ಕಿಂತ ದೊಡ್ಡದು. ಆದ ಕಾರಣದಿಂದ ಅವರಿಗೆ ಗಲ್ಲು ಶಿಕ್ಷೆ ಆದರೂ ಆಗಬಹುದು. ಕೊಲೆ ಮಾತ್ರವಲ್ಲದೆ ಅವರ ವಿರುದ್ಧ ಹಲವು ಪ್ರಕರಣಗಳಿವೆ. ಆದರೆ ಈ ಬಗ್ಗೆ ಆರ್'ಜೆಡಿ ಸ್ಪಷ್ಟನೆ ಕೇಳಿಲ್ಲ.
ಅಲ್ಲದೆ ತೇಜಸ್ವಿ ಯಾದವ್ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಸ್ಪಷ್ಟನೆ ಕೇಳಲು ನಿತೀಶ್ ಕುಮಾರ್ ಯಾರು? ಅವರೇನು ಪೊಲೀಸ್ ಠಾಣೆಯೇ?. ಬಿಹಾರದ ಜನತೆ 5 ವರ್ಷದ ಅವಧಿಗೆ ಮತ ಹಾಕಿದ್ದಾರೆ. ಹೀಗಾಗಿ ರಾಜೀನಾಮೆ ನೀಡದಂತೆ ನಾನು ಅವರಿಗೆ ಹೇಳಿದ್ದೆ. ಆದರೆ ನಿತೀಶ್ ಬಿಜೆಪಿ ಮತ್ತು ಆರ್ ಎಸ್ಎಸ್ ಜೊತೆ ಕೈಜೋಡಿಸಿ ತಾವು ನಿಷ್ಕಳಂಕ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.
ಬಿಹಾರ್ ಪಕ್ಷದ ಬಲಾಬಲಾ
ಒಟ್ಟು ವಿಧಾನಸಭೆ ಸದಸ್ಯ ಬಲ : 243
ಜೆಡಿಯು: 71, ಬಿಜೆಪಿ: 53
ಆರ್'ಜೆಡಿ: 80, ಕಾಂಗ್ರೆಸ್: 27
ಬಹುಮತ ಸಾಬೀತಿಗೆ 122 ಸದಸ್ಯ ಸಂಖ್ಯೆ ಬೇಕು
