ಆಗಸ್ಟ್ 24ರಂದು ರಾಮಪಾಲ್ ಪ್ರಕರಣದ ತೀರ್ಪು ನೀಡಲು ನಿಗದಿಯಾಗಿತ್ತು. ಆದರೆ, ರಾಮ್ ರಹೀಮ್ ಸಿಂಗ್ ಪ್ರಕರಣದ ತೀರ್ಪು ಆ. 25ಕ್ಕೆ ನಿಗದಿಯಾಗಿದ್ದರಿಂದ ರಾಮಪಾಲ್ ಪ್ರಕರಣದ ತೀರ್ಪನ್ನು ಮುಂದೂಡಲಾಗಿತ್ತು. ಇಂದು ಹಿಸಾರ್‌ ಕೋರ್ಟ್‌'ನಲ್ಲಿ ತೀರ್ಪು ಹೊರಬೀಳಲಿದೆ.

ರೋಹ್ಟಕ್(ಆ. 29): ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರುಮಿತ್‌ ರಾಮ್ ರಹೀಮ್ ಸಿಂಗ್‌ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವುದು ಗೊತ್ತಿರುವ ವಿಷಯ. ಇದರ ಬೆನ್ನಲ್ಲೇ ಇಂದು ಮತ್ತೊಬ್ಬ ಸ್ವಯಂಘೋಷಿತ ದೇವಮಾನವ ಬಾಬಾ ರಾಮ್‌'ಪಾಲ್‌ ವಿರುದ್ಧದ ಪ್ರಕರಣದ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಸತ್'ಲೋಕ್ ಆಶ್ರಮದ ರಾಮಪಾಲ್ ಬಾಬಾ ವಿರುದ್ಧದ ಹಲವು ಪ್ರಕರಣಗಳ ಪೈಕಿ ಎರಡು ಪ್ರಕರಣಗಳಲ್ಲಿ ಇಂದು ತೀರ್ಪು ಬರಲಿದೆ.

2006ರಲ್ಲಿ ರಾಮ್'ಪಾಲ್ ಬಾಬಾ ವಿರುದ್ಧ ಮೊದಲು ಕೊಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಸತತ 43 ಬಾರಿ ರಾಮ್‌‌'ಪಾಲ್‌ ಗೈರಾಗಿದ್ದ. ಈ ಹಿನ್ನೆಲೆಯಲ್ಲಿ 2014ರಲ್ಲಿ ಈತನನ್ನು ಅರೆಸ್ಟ್‌ ಮಾಡಲು ಆದೇಶ ಹೊರಡಿಸಲಾಗಿತ್ತು. ಈ ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಈ ರಾಮ್‌'ಪಾಲ್‌ ಹರಿಯಾನದ ರೋಹ್ಟಕ್'ನಲ್ಲಿನ ತನ್ನ ಸತ್ಲೋಕ್ ಆಶ್ರಮದಲ್ಲಿ ಬೆಂಬಲಿಗರನ್ನೇ ಗುರಾಣಿಯಾಗಿಟ್ಟುಕೊಂಡಿದ್ದ. ಪೋಲೀಸರು ಆಶ್ರಮ ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಎಲ್ಲ ರೀತಿಯ ರಣತಂತ್ರ ರೂಪಿಸಿದ್ದ ಈತ, ಆಶ್ರಮದಲ್ಲೇ ಅವಿತುಕೊಂಡು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದ. ಪೊಲೀಸರು ಪಟ್ಟುಬಿಡದೇ ಆಶ್ರಮಕ್ಕೆ ನುಗ್ಗಿದಾಗ ಸಂಭವಿಸಿದ ಹಿಂಸಾಚಾರದಲ್ಲಿ 18 ತಿಂಗಳ ಹಸುಗೂಸು ಸೇರಿದಂತೆ 6 ಅಮಾಯಕ ಮಹಿಳೆಯರು ಸಾವಿಗೀಡಾಗಿದ್ದರು. ಅಂದಾಜು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕೊನೆಗೂ ಸತತ 2 ದಿನಗಳ ಕಾರ್ಯಾಚರಣೆ ಬಳಿಕ ರಾಮ್‌'ಪಾಲ್‌ನನ್ನು ಪೊಲೀಸರು ಆಶ್ರಮದಲ್ಲಿಯೇ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

2014ರ ನವೆಂಬರ್ 18ರಂದು ರಾಮ್'ಪಾಲ್ ಮತ್ತವರ ಬೆಂಬಲಿಗರ ವಿರುದ್ಧ ಐಪಿಸಿ 186, 332 ಮತ್ತು 253 ಸೆಕ್ಷನ್'ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಹಿಸಾರ್'ನ ಸೆಂಟ್ರಲ್ ಜೈಲಿನಲ್ಲಿ ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ ಮಾಡಲಾಯಿತು. ಪ್ರತೀ ವಿಚಾರಣೆಯಲ್ಲೂ ಬಾಬಾ ರಾಮಪಾಲ್'ನ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಅಡಚಣೆಗೆ ಯತ್ನಿಸುವುದು ನಡೆದೇ ಇತ್ತು.

ಆಗಸ್ಟ್ 24ರಂದು ರಾಮಪಾಲ್ ಪ್ರಕರಣದ ತೀರ್ಪು ನೀಡಲು ನಿಗದಿಯಾಗಿತ್ತು. ಆದರೆ, ರಾಮ್ ರಹೀಮ್ ಸಿಂಗ್ ಪ್ರಕರಣದ ತೀರ್ಪು ಆ. 25ಕ್ಕೆ ನಿಗದಿಯಾಗಿದ್ದರಿಂದ ರಾಮಪಾಲ್ ಪ್ರಕರಣದ ತೀರ್ಪನ್ನು ಮುಂದೂಡಲಾಗಿತ್ತು. ಇಂದು ಹಿಸಾರ್‌ ಕೋರ್ಟ್‌'ನಲ್ಲಿ ತೀರ್ಪು ಹೊರಬೀಳಲಿದೆ.