ನವದೆಹಲಿ[ಜು,09]: ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಸೋಲಿನ ಬಳಿಕ ಕಾಂಗ್ರೆಸ್ ವಲಯದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ರಾಹುಲ್ ಗಾಂಧಿ, ಮಿಲಿಂದ್ ದೆವೋರಾ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಹೀಗೆ ಪ್ರಮುಖ ನಾಯಕರೆಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿರುವ ಪ್ರಯಾಂಕಾ ಗಾಂಧಿ ಕೂಡಾ ರಾಜೀನಾಮೆ ನೀಡುತ್ತಾರಾ ಎಂಬ ಮಾತುಗಳು ಕೇಳಲಾರಂಭಿಸಿವೆ. 

ಲೋಕಸಭಾ ಚುನಾವಣೆ ಕೆಲವೇ ದಿನಗಳು ಬಾಕಿ ಇದೆ ಎನ್ನುವಾಗ ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದ ಪೂರ್ವ ವಿಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಪ್ರಿಯಾಂಕಾ ಗಾಂಧಿ ಎಂಟ್ರಿ ಪಕ್ಷಕ್ಕೆ ಲಾಭ ತಂದುಕೊಡಲಿದೆ ಎಂಬುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿತ್ತು. ಆದರೆ ಚುನಾವಣಾ ಫಲಿತಾಂಶದಲ್ಲಿ ಈ ಎಲ್ಲಾ ಲೆಕ್ಕಾಚಾರ ತಲೆ ಕೆಳಗಾಗಿತ್ತು. ಉತ್ತರ ಪ್ರದೇಶದಲ್ಲಿ ಮೋದಿ ಅಲೆ ಎಷ್ಟು ದೊಡ್ಡ ಮಟ್ಟದ ಸುನಾಮಿ ಎಬ್ಬಿಸಿತ್ತು ಎಂದರೆ, ರಾಹುಲ್ ಗಾಂಧಿ ತಮ್ಮ ತವರು ಕ್ಷೇತ್ರ ಅಮೇಠಿಯಲ್ಲಿ ಸೋಲಭವಿಸಿದ್ದರು. ಅತ್ತ ಸೋನಿಯಾ ಗಾಂಧಿ ಕೂಡಾ ತಮ್ಮ ಕ್ಷೇತ್ರ ರಾಯ್ ಬರೇಲಿಯಲ್ಲಿ ಮೊದಲ ಬಾರಿ ಭಾರೀ ಪೈಪೋಟಿ ನಡೆಸಿ ಗೆದ್ದಿದ್ದರು. 

ಮತ್ತೊಂದೆಡೆ ಕಾಂಗ್ರೆಸ್ ಉತ್ತರ ಪ್ರದೇಶದ ಪಶ್ಚಿಮ ಭಾಗದ ಜವಾಬ್ದಾರಿಯನ್ನು ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾಗೆ ವಹಿಸಿತ್ತು. ಆದರೆ ಲೋಕಸಭೆಯಲ್ಲಿ ಎದುರಿಸಿದ ಸೋಲಿನ ಬಳಿಕ , ಸೋಲಿನ ಹೊಣೆ ಹೊತ್ತ ಸಿಂಧಿಯಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಸೇರಿದಂತೆ ಇಡೀ ತಂಡ ರಾಜೀನಾಮೆ ಸಲ್ಲಿಸಿದೆ. ಸದ್ಯ ಪ್ರಯಾಮಖಾ ಗಾಂಧಿ ಕೂಡಾ ರಾಜೀನಾಮೆ ನಿಡುವ ಹಾದಿಯಲ್ಲಿದ್ದಾರೆನ್ನಲಾಗುತ್ತಿದೆ.

ಇನ್ನು ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಕಾಂಗ್ರೆಸ್ ಪಕ್ಷ ಅಧರ್ಧಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಆದರೆ ಈವರೆಗೂ ಕಾಂಗ್ರೆಸ್ ಪಕ್ಷಕ್ಕೆ ಯಾವೊಬ್ಬ ಅಭ್ಯರ್ಥಿಯ ಹಸರು ಫೈನಲ್ ಆಗಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.