ಇಂದೋರ್‌[ಮೇ.30]: ಲೋಕಸಭಾ ಚುನಾವಣಾ ಪ್ರಚಾರದ ಹೊತ್ತಿನಲ್ಲಿ ಬಿಜೆಪಿಯ ಹಾಲಿ ಸಂಸದೆ ಹಾಗೂ ಮಾಲೆಗಾಂವ್‌ ಬಾಂಬ್‌ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ಮಹಾತ್ಮ ಗಾಂಧಿ ಹಂತಕ ನಾಥುರಾಮ್‌ ಗೋಡ್ಸೆಯನ್ನು ದೇಶಭಕ್ತ ಎಂದು ಸಂಭೋದಿಸಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದ ಬೆನ್ನಲ್ಲೇ, ಇದೀಗ ಮಧ್ಯಪ್ರದೇಶದ ಬಿಜೆಪಿ ಶಾಸಕಿಯೊಬ್ಬರು ಗೋಡ್ಸೆಯನ್ನು ರಾಷ್ಟ್ರೀಯವಾದಿ ಎಂದು ಕರೆದು ವಿವಾದದ ಕಿಡಿ ಹೊತ್ತಿಸಿದ್ದಾರೆ.

ಇಲ್ಲಿನ ಮೌ ವಿಧಾನಸಭೆ ಕ್ಷೇತ್ರದ ಶಾಸಕಿಯಾದ ಉಷಾ ಠಾಕೂರ್‌ ಅವರು, ಗೋಡ್ಸೆಯನ್ನು ರಾಷ್ಟ್ರೀಯವಾದಿ ಎನ್ನುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಗೋಡ್ಸೆ ಒಬ್ಬ ರಾಷ್ಟ್ರೀಯವಾದಿ. ತನ್ನ ಜೀವಿತಾವಧಿಯಲ್ಲಿ ದೇಶದ ಕುರಿತಾಗಿಯೇ ಚಿಂತಿತನಾಗಿದ್ದ. ಅಲ್ಲದೆ, ಗಾಂಧೀಜಿ ಅವರನ್ನು ಆತ ಏಕೆ ಗುಂಡು ಹಾರಿಸಿ ಹತ್ಯೆ ಮಾಡಿದ ಎಂಬುದು ಆತನಿಗೆ ಮಾತ್ರವೇ ಗೊತ್ತು ಎಂದು ಹೇಳಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಘಟಕವು, ಇದೊಂದು ತಿರುಚಿದ ವಿಡಿಯೋ ಆಗಿದೆ ಎಂದು ದೂರಿದೆ.