ಈಗ 5 ಬಾರಿ ಶಾಸಕನಾಗಿರುವ ಪಾರ್ಶೊತ್ತಮ್ ಸೋಲಂಕಿ ಖಾತೆ ಹಂಚಿಕೆ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ ಭಾವನಗರ ಕ್ಷೇತ್ರವನ್ನು ಪ್ರತಿನಿಧಿಸುವ ಸೋಲಂಕಿಗೆ ಈ ಬಾರಿ ಮೀನುಗಾರಿಕೆ ಇಲಾಖೆಯನ್ನು ನೀಡಲಾಗಿದೆ
ಗಾಂಧಿನಗರ: ವಿಜಯ್ ರೂಪಾನಿ ಎರಡನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬೆನ್ನಲ್ಲೇ, ಬಿಜೆಪಿಯಲ್ಲಿ ಸಂಪುಟ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಭಿನ್ನಮತ ಮುಂದುವರೆದಿದೆ.
ಈಗ 5 ಬಾರಿ ಶಾಸಕನಾಗಿರುವ ಪಾರ್ಶೊತ್ತಮ್ ಸೋಲಂಕಿ ಖಾತೆ ಹಂಚಿಕೆ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಕೋಲಿ ಸಮುದಾಯದಿಂದ ಬಂದಿರುವ ಸೋಲಂಕಿ, ಖಾತೆ ಹಂಚಿಕೆಯಲ್ಲಿ ತಮ್ಮ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗದೇ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಭಾವನಗರ ಕ್ಷೇತ್ರವನ್ನು ಪ್ರತಿನಿಧಿಸುವ ಸೋಲಂಕಿಗೆ ಈ ಬಾರಿ ಮೀನುಗಾರಿಕೆ ಇಲಾಖೆಯನ್ನು ನೀಡಲಾಗಿದೆ. ಈ ಬಗ್ಗೆ ಸಿಎಂ ರೂಪಾನಿಗೆ ಕರೆ ಮಾಡಿರುವ ಸೋಲಂಕಿ, ಕೇವಲ ಒಂದು ಖಾತೆ ನೀಡಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆಂದು ಇಂಡಿಯನ್ ಎಕ್ಸ್'ಪ್ರೆಸ್ ವರದಿ ಮಾಡಿದೆ.
ನಾನು 5 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅದರೆ ನನಗೆ ಕೇವಲ ಒಂದು ಖಾತೆಯನ್ನು ಮಾತ್ರ ನೀಡಲಾಗಿದೆ. ಇದರಿಂದ ಕೋಲಿ ಸಮಾಜಕ್ಕೆ ನೋವಾಗಿದೆ. ಕೋಲಿ ಸಮುದಾಯಕ್ಕೆ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಒಂದೋ ನನಗೆ ಹೆಚ್ಚು ಇಲಾಖೆಗಳನ್ನು ನೀಡಿ ಅಥವಾ ಕೋಲಿ ಸಮಾಜದಿಂದ ಇನ್ನೊಬ್ಬರನ್ನು ಸಂಪುಟಕ್ಕೆ ಸೇರಿಸಿ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ನಾಲ್ಕೈದು ದಿನಗಳಲ್ಲಿ ಮಾತನಾಡುವುದಾಗಿ ಸಿಎಂ ಹೇಳಿದ್ದಾರೆನ್ನಲಾಗಿದೆ. ಸಿಎಂ ನಿರ್ಧಾರದ ಬಳಿಕ ಮುಂದಿನ ತಿರ್ಮಾನ ಕೈಗೊಳ್ಳುವುದಾಗಿ ಸೋಲಂಕಿ ಹೇಳಿದ್ದಾರೆ.
ಕಳೆದ ವಾರ, ತಮಗೆ ಮಹತ್ವದ ಖಾತೆ ನೀಡಿಲ್ಲ ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮುನಿಸಿಕೊಂಡಿದ್ದು, ಕಚೇರಿಯಿಂದ ದೂರವೇ ಉಳಿದಿದ್ದರು. ಅಲ್ಲದೇ ತಮಗೆ 3 ದಿನದಲ್ಲಿ ಸೂಕ್ತ ಖಾತೆ ನೀಡದೇ ಹೋದಲ್ಲಿ ಸಚಿವ ಸ್ಥಾನ ತ್ಯಜಿಸುವ ಬೆದರಿಕೆಯನ್ನು ಹಾಕಿದ್ದರು.
