ನವದೆಹಲಿ[ಜು.08]: ದೇಶದ ಏಕೈಕ ಸಂಸ್ಕೃತ ಗ್ರಾಮ ಎಂಬ ಹಿರಿಮೆ ಇದುವರೆಗೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮಕ್ಕಿತ್ತು. ಶೀಘ್ರವೇ ಶಿವಮೊಗ್ಗ ಜಿಲ್ಲೆಯ ಚಿಟ್ಟೆಬೈಲ್ ಗ್ರಾಮ ಕೂಡಾ ಇಂಥದ್ದೇ ಹಿರಿಮೆಗೆ ಪಾತ್ರವಾಗಲಿದೆ.

ಹೌದು. ಸಂಸ್ಕೃತ ಭಾಷೆ ಬಳಕೆ ಹೆಚ್ಚಿಸಲು ನಿರ್ಧರಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ದೇಶದ ಗ್ರಾಮಗಳನ್ನು ಆಯ್ಕೆ ಮಾಡಿ ಕೊಂಡು, ಅಲ್ಲಿ ಸಂಸ್ಕೃತ ಭಾಷೆಯನ್ನು ಆಡುಭಾಷೆ ಯಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

ಈ ಯೋಜನೆ ಅನ್ವಯ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಚಿಟ್ಟೆಬೈಲ್, ತ್ರಿಪುರಾದ ಜುಬರ್ತಾ, ಹಿಮಾಚಲ ಪ್ರದೇಶದ ಮಸೋತ್, ಕೇರಳದ ಅಟಾಟ್ ಮತ್ತು ಮಧ್ಯಪ್ರದೇಶ ಬರೈ ಗ್ರಾಮಗಳಲ್ಲಿ ಸಂಸ್ಕೃತ ಭಾಷೆಯನ್ನು ಹೆಚ್ಚು ಪ್ರಚುರಪಡಿಸಲು ನಿರ್ಧರಿಸಲಾಗಿದೆ.

ದೇಶದಲ್ಲಿ ಸಂಸ್ಕೃತ ಬೆಳವಣಿಗೆಂದು ಇರುವ ಮೂರು ಕೇಂದ್ರೀಯ ವಿಶ್ವವಿದ್ಯಾಲಯಗಳ ಪೈಕಿ ಒಂದಾದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನವು, ಈ ಐದೂ ಜಿಲ್ಲೆಗಳನ್ನು ದತ್ತುತೆಗೆದುಕೊಂಡಿದ್ದು, ಗ್ರಾಮಗಳ ಜನರಿಗೆ ಸಂಸ್ಕೃತ ಭಾಷೆ ಕಲಿಸುವ ಮೂಲಕ, ಅಲ್ಲಿ ಸಂಸ್ಕೃತವನ್ನು ನಿತ್ಯ ಬಳಕೆಯ ಭಾಷೆಯನ್ನಾಗಿ ಪರಿವರ್ತಿಸಲು ಯತ್ನಿಸಲಿದೆ.

ದೇಶದಲ್ಲಿ ಇನ್ನೂ ಎರಡು ಇದೇ ಮಾದರಿಯ ಸಂಸ್ಕೃತ ವಿಶ್ವವಿದ್ಯಾಲಯಗಳಿದ್ದು, ಅವು ಕೂಡಾ ಶೀಘ್ರವೇ ಇದೇ ರೀತಿಯಲ್ಲಿ ತಲಾ 5 ಹಳ್ಳಿಗಳನ್ನು ದತ್ತುಪಡೆದು, ಅಲ್ಲಿ ಸಂಸ್ಕೃತ ಭಾಷೆಯ ಬೆಳವಣಿಗೆ ಶ್ರಮಿಸಲಿವೆ ಎನ್ನಲಾಗಿದೆ.

ಎಲ್ಲಿದೆ ಚಿಟ್ಟೆಬೈಲ್: ಮತ್ತೂರು ರೀತಿಯಲ್ಲೇ ಚಿಟ್ಟೆಬೈಲ್, ಶಿವಮೊಗ್ಗ ಜಿಲ್ಲೆಯಲ್ಲಿದೆ. ಮತ್ತೂರು ಶಿವಮೊಗ್ಗ ತಾಲೂಕಿಗೆ ಸೇರಿದ್ದರೆ, ಚಿಟ್ಟೆಬೈಲ್ ತೀರ್ಥಹಳ್ಳಿ ತಾಲೂಕಿಗೆ ಸೇರಿದ್ದಾಗಿದೆ.