ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎನ್ನಲಾದ 2.77 ಎಕರೆ ಜಾಗವನ್ನು ತಲಾ 1/3 ಭಾಗವಾಗಿ ಹಿಂದೂ ಮಹಾ ಸಭಾ, ಸುನ್ನಿ ವಕ್ಫ್ ಬೋರ್ಡ್ ಹಾಗೂ ಹಿಂದೂ ಸಂಘಟನೆಯಾದ ನಿರ್ಮೋಹಿ ಅಖಾಡಕ್ಕೆ ಹಂಚಿ ತೀರ್ಪು ಹೊರಡಿಸಿದೆ.
ನವದೆಹಲಿ(ಮಾ.11): ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಗೆಲ್ಲುತ್ತಿದ್ದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಡ ಹೆಚ್ಚುವ ಸಾಧ್ಯತೆಗಳಿವೆ. ಸ್ವತಃ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಈ ಸುಳಿವು ನೀಡಿದ್ದು, ಇನ್ನು ಉತ್ತರ ಪ್ರದೇಶದಲ್ಲಿ ಯಾರೂ ನನ್ನನ್ನು ವಿರೋಧಿಸುವವರಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರತಿ ಬಾರಿ ಯಾವುದೇ ಚುನಾವಣೆ ನಡೆದಾಗಲೂ ಬಿಜೆಪಿಯವರು ರಾಮಮಂದಿರ ನಿರ್ಮಾಣದ ವಿಷಯ ಎತ್ತುತ್ತಾರೆ. ಆದರೆ, ನಂತರ ಅದನ್ನು ಮರೆತುಬಿಡುತ್ತಾರೆ ಎಂಬ ಆರೋಪವಿದೆ. ಸದ್ಯ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಅನ್ಯ ಪಕ್ಷವೊಂದು ಅಧಿಕಾರದಲ್ಲಿರುವ ರಾಜ್ಯದಲ್ಲಿ ರಾಮಮಂದಿರ ನಿರ್ಮಾಣದಂತಹ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಿರಲಿಲ್ಲ. ಪ್ರಸ್ತುತ ಚುನಾವಣಾ ಎಣಿಕೆ ನಡೆಯುತ್ತಿದ್ದು ಬಿಜೆಪಿ ಮಧ್ಯಾಹ್ನದ ವೇಳೆಗೆ ಸುಮಾರು 309 ಸ್ಥಾನಗಳ ಮನ್ನೆಡೆ ಕಾಯ್ದುಕೊಂಡಿದೆ. ಈಗ ಕೇಂದ್ರದಲ್ಲೂ, ಉತ್ತರ ಪ್ರದೇಶದಲ್ಲೂ ಬಿಜೆಪಿಯೇ ಅಧಿಕಾರ ಹಿಡಿಯುವುದರಿಂದ ಪಕ್ಷದೊಳಗಿನಿಂದ, ಹಿಂದೂ ಪರ ಸಂಘಟನೆಗಳಿಂದ ಹಾಗೂ ಉತ್ತರ ಪ್ರದೇಶದ ಹಿಂದೂಗಳಿಂದ ರಾಮಮಂದಿರ ನಿರ್ಮಾಣಕ್ಕೆ ಒತ್ತಡ ನಿರ್ಮಾಣವಾಗುವ ಸಾಧ್ಯತೆಯಿದೆ.
ಈಗಾಗಲೇ ಅಯೋಧ್ಯೆಯ ವಿವಾದ ಉತ್ತರ ಪ್ರದೇಶದ ಹೈಕೋರ್ಟ್ ತೀರ್ಪು ನೀಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎನ್ನಲಾದ 2.77 ಎಕರೆ ಜಾಗವನ್ನು ತಲಾ 1/3 ಭಾಗವಾಗಿ ಹಿಂದೂ ಮಹಾ ಸಭಾ, ಸುನ್ನಿ ವಕ್ಫ್ ಬೋರ್ಡ್ ಹಾಗೂ ಹಿಂದೂ ಸಂಘಟನೆಯಾದ ನಿರ್ಮೋಹಿ ಅಖಾಡಕ್ಕೆ ಹಂಚಿ ತೀರ್ಪು ಹೊರಡಿಸಿದೆ. ಸದ್ಯ ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಮಾರ್ಚ್ 21ರಂದು ನಾನು ಸುಪ್ರೀಂ ಕೋರ್ಟ್ ಆ ಪ್ರಕರಣವನ್ನು ಆದಷ್ಟು ಶೀಘ್ರದಲ್ಲಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
