ಮೆಕ್ಸಿಕೋ[ಆ.06]: ಚುನಾವಣಾ ಪ್ರಚಾರದ ವೇಳೆ ರಾಜಕೀಯ ನಾಯಕರು ಮತದಾರನಿಗೆ ಹಲವಾರು ಭರವಸೆ ನೀಡುತ್ತಾರೆ. ಆದರೆ ಅವುಗಳನ್ನು ಈಡೇರಿಸುವವರ ಸಂಖ್ಯೆ ಮಾತ್ರ ಅತೀ ವಿರಳ. ತಾವು ರಾಜಕೀಯ ನಾಯಕರ ಮಾತಿಗೆ ಮರುಳಾಗಿ ಮೋಸ ಹೋಗಿದ್ದೇವೆಂದು ತಿಳಿದಾಗ ಮತದಾರರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಸೋಶಿಯಲ್ ಮೀಡಿಯಾ ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ವಿರೋಧವನ್ನೂ ವ್ಯಕ್ತಪಡಿಸುತ್ತಾರೆ. ಆದರೆ ಮೆಕ್ಸಿಕೋದಲ್ಲಿ ಭಿನ್ನವಾದ ನಡೆ ಅನುಸರಿಸಲಾಗಿದೆ. ಭರವಸೆ ಈಡೇರಿಸದ ಸಂಸದನಿಗೆ ಮಹಿಳೆಯರ ಬಟ್ಟೆ ತೊಡಿಸಿ ಇಡೀ ನಗರದ ಮೆರವಣಿಗೆ ಮಾಡಿಸಿದ್ದಾರೆ.

ಈ ಘಟನೆ ದಕ್ಷಿಣ ಮೆಕ್ಸಿಕೋದಲ್ಲಿ ನಡೆದಿದೆ. ಇಲ್ಲಿನ ಸಂಸದ ಕ್ಷೇವಿಯರ್ ಜಿಮೆನೆಜ್ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಅವರು ಗಾಗ್ರಾ ಹಾಗೂ ಚೋಲಿ ಹಾಕಿದ್ದಾರೆ. ಮೆಕ್ಸಿಕನ್ ಪತ್ರಿಕೆ ವರದಿಯನ್ವಯ ಸ್ಥಳೀಯ ನಗರ ಪಾಲಿಕೆಯ ಮತ್ತೊಬ್ಬ ಅಧಿಕಾರಿ ಲೂಯಿಸ್ ಟಾನ್ ರಿಗೂ ಮಹಿಳೆಯರ ಡ್ರೆಸ್ ಹಾಕಿಸಿ ಸ್ಥಳೀಯರು ಮೆರವಿಣಿಗೆ ಮಾಡಿಸಿದ್ದಾರೆನ್ನಲಾಗಿದೆ.

ಹಿಂಬದಿಯಲ್ಲಿ ಪೋಸ್ಟರ್ ಹಿಡಿದು ಬಂದ ಜನತೆ

ಈ ಇಬ್ಬರು ರಾಜಕಾರಣಿಗಳನ್ನು ಮೆರವಣಿಗೆ ಮಾಡಿಸುತ್ತಿದ್ದ ವೇಳೆ ಜನ ಸಾಮಾನ್ಯರು ಕೈಯ್ಯಲ್ಲಿ ಪೋಸ್ಟರ್ ಹಿಡಿದು ಬಂದಿದ್ದಾರೆ. ಈ ಪೋಸ್ಟರ್ ಗಳಲ್ಲಿ ಇವರು ಭರವಸೆ ಈಡೇರಿಸಲಿಲ್ಲ ಎಂದು ಬರೆಯಲಾಗಿತ್ತು. ಈ ಸಂಸದ ಚುನಾವಣಾ ಪ್ರಚಾರದ ವೇಳೆ ನೀರಿನ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಇದಕ್ಕಾಗಿ 1ಕೋಟಿ 8 ಲಕ್ಷ ರೂ ಬಿಡುಗಡೆಗೊಳಿಸುವುದಾಗಿಯೂ ಹೇಳಿದ್ದರು. ಆದರೆ ಅಧಿಕಾರ ಪಡೆದ ಬಳಿಕ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನಲಾಗಿದೆ. 

ಸಂಸದ ಈ ಹಣವನ್ನು ನುಂಗಿ ಹಾಕಿದ್ದಾರೆ ಎಂದು ಆರೋಪಿಸಿರುವ ಮತದಾರರು ಇಂತಹ ಶಿಕ್ಷೆ ನೀಡಿದ್ದಾರೆ. ಇಷ್ಟೇ ಅಲ್ಲದೇ ನೀಡಿದ ಭರವಸೆ ಈಡೇರಿಸಲು ವಿಳಂಬ ಮಾಡಿದಲ್ಲಿ ಮುಂದೆ ತಲೆ ಕೂಡಲು ಬೋಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.